ಲಂಚ ಸಂಬಂಧಿತ ಆಸ್ತಿಗಳನ್ನು ಟೋಟಲ್ ಎನರ್ಜೀಸ್‌ಗೆ ಮಾರುವಾಗ ಅಮೆರಿಕದ ತನಿಖೆಯ ಬಗ್ಗೆ ಅದಾನಿಗಳಿಗೆ ತಿಳಿದಿತ್ತು: ಪ್ರಾಸಿಕ್ಯೂಷನ್
ಪ್ಯಾರಿಸ್: ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಭಾರತದ ಅತಿ ದೊಡ್ಡ ಸೋಲಾರ್ ಪಾರ್ಕ್‌ನ ಪಾಲನ್ನು ಫ್ರಾನ್ಸ್‌ನ ತೈಲ ಮತ್ತು ಅನಿಲ ಕಂಪನಿ ಟೋಟಲ್ ಎನರ್ಜೀಸ್‌ಗೆ ಮಾರಾಟ ಮಾಡಿದಾಗ ಲಂಚದ ಆರೋಪದಲ್ಲಿ ತಮ್ಮ ನವೀಕರಿಸಬಹುದಾದ ಇಂಧನ ಕಂಪನಿಯ ಬಗ್ಗೆ ಅಮೆರಿಕವು ತನಿಖೆ ನಡೆಸುತ್ತಿದೆ ಎನ್ನುವುದು ಅವರಿಗೆ ತಿಳಿದಿತ್ತು ಎಂದು ಅಲ್ಲಿಯ ಪ್ರಾಸಿಕ್ಯೂಟರ್‌ಗಳು ಕಾನೂನು ದಾಖಲೆಗಳಲ್ಲಿ ಆರೋಪಿಸಿದ್ದಾರೆ ಎಂದು ಸುದ್ದಿಸಂಸ್ಥೆ ರಾಯ್ಟರ್ಸ್ ವರದಿ ಮಾಡಿದೆ. ದಾಖಲೆಗಳನ್ನು ರಾಯ್ಟರ್ಸ್ ಪರಿಶೀಲಿಸಿದೆ.
ತಾನು ಖಾವ್ಡಾ ಸೋಲಾರ್ ಪಾರ್ಕ್‌ನಲ್ಲಿ ಪಾಲನ್ನು ಖರೀದಿಸಿದಾಗ ಅಮೆರಿಕ ಅಧಿಕಾರಿಗಳು ಲಂಚ ಮತ್ತು ವಂಚನೆ ಆರೋಪದಲ್ಲಿ ಅದಾನಿಗಳ ವಿರುದ್ಧ ತನಿಖೆಯನ್ನು ನಡೆಸುತ್ತಿದ್ದಾರೆ ಎನ್ನುವುದು ಟೋಟಲ್ ಎನರ್ಜೀಸ್‌ಗೆ ತಿಳಿದಿತ್ತೇ ಎಂಬ ಬಗ್ಗೆ ಸುದ್ದಿಸಂಸ್ಥೆಯ ಪ್ರಶ್ನೆಗೆ ಅದು ತಕ್ಷಣ ಉತ್ತರಿಸಿಲ್ಲ.
ಅಮೆರಿಕದ ಅಧಿಕಾರಿಗಳು ಗುರುವಾರ ಗೌತಮ್ ಅದಾನಿ, ಅವರ ಸೋದರ ಪುತ್ರ ಸಾಗರ ಅದಾನಿ ಮತ್ತು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ಮಾಜಿ ಸಿಇಒ ವಿನೀತ ಜೈನ್ ಸೇರಿದಂತೆ ಎಂಟು ಜನರ ವಿರುದ್ಧ ಸೌರ ವಿದ್ಯುತ್ ಯೋಜನೆಯ ಯಶಸ್ಸನ್ನು ಖಚಿತಪಡಿಸಲು ಜುಲೈ 2021 ಮತ್ತು 2024ರ ನಡುವೆ ಭಾರತೀಯ ಅಧಿಕಾರಿಗಳಿಗೆ ಲಂಚವನ್ನು ಪಾವತಿಸಿದ್ದ ಆರೋಪವನ್ನು ಹೊರಿಸಿದ್ದಾರೆ.
ಟೋಟಲ್ ಎನರ್ಜೀಸ್ ಸೆಪ್ಟೆಂಬರ್ 2024ರಲ್ಲಿ ಖಾವ್ಡಾ ಸೋಲಾರ್ ಪಾರ್ಕ್‌ನಲ್ಲಿಯ 1.15 ಗಿಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರಗಳಲ್ಲಿ ಶೇ.50ರಷ್ಟು ಪಾಲು ಬಂಡವಾಳದ ಖರೀದಿಯೊಂದಿಗೆ ಅದಾನಿ ಗ್ರೀನ್ ಎನರ್ಜಿ ಜೊತೆ ಜಂಟಿ ಉದ್ಯಮಕ್ಕಾಗಿ 44 ಮಿಲಿಯನ್ ಡಾಲರ್ ಗಳನ್ನು ಪಾವತಿಸಿತ್ತು. ಇದು ಲಂಚದ ಆರೋಪಗಳ ಕೇಂದ್ರಬಿಂದುವಾಗಿರುವ ಯೋಜನೆಯಾಗಿದೆ.
ಕ್ರಿಮಿನಲ್ ಪ್ರಕರಣದಲ್ಲಿ ಟೋಟಲ್ ಎನರ್ಜೀಸ್ ಅನ್ನು ಹೆಸರಿಸಲಾಗಿಲ್ಲ. ಅದಾನಿ ಗ್ರೂಪ್ ತನ್ನ ವಿರುದ್ಧದ ಆರೋಪಗಳನ್ನು ಆಧಾರರಹಿತ ಎಂದು ಬಣ್ಣಿಸಿದೆ.
ಅಮೆರಿಕ ನ್ಯಾಯಾಲಯದ ದೋಷಾರೋಪದ ಪ್ರಕಾರ ಟೋಟಲ್ ಎನರ್ಜೀಸ್‌ಗೆ ಮಾರಾಟಕ್ಕೆ ಒಂದು ವರ್ಷ ಮೊದಲು ಮಾರ್ಚ್ 2023ರಲ್ಲಿ ಎಫ್‌ಬಿಐ ವಿಶೇಷ ಏಜೆಂಟ್‌ಗಳು ಅದಾನಿ ಗ್ರೀನ್ ಎನರ್ಜಿಯ ಕಾರ್ಯಕಾರಿ ನಿರ್ದೇಶಕ ಸಾಗರ ಅದಾನಿಗೆ ಸರ್ಚ್ ವಾರಂಟ್ ಮತ್ತು ಗ್ರ್ಯಾಂಡ್ ಜ್ಯೂರಿ ಸಪೀನಾ ಜಾರಿಗೊಳಿಸಿದ್ದರು.
ಗ್ರ್ಯಾಂಡ್ ಜ್ಯೂರಿ ಸಪೀನಾ ದೋಷಾರೋಪವನ್ನು ಹೊರಿಸುವ ಮುನ್ನ ಪ್ರಾಸಿಕ್ಯೂಷನ್ ಆರೋಪಗಳನ್ನು ನ್ಯಾಯಾಧೀಶರ ಸಮಿತಿಯು ಪರಿಶೀಲಿಸಿದೆ ಮತ್ತು ಕ್ರಿಮಿನಲ್ ತನಿಖೆಯು ಆರಂಭಗೊಂಡಿದೆ ಎನ್ನುವುದನ್ನು ಸೂಚಿಸುತ್ತದೆ. ಗ್ರ್ಯಾಂಡ್ ಜ್ಯೂರಿ ಸಪೀನಾಕ್ಕೆ ಉತ್ತರಿಸದಿದ್ದರೆ ನ್ಯಾಯಾಂಗ ನಿಂದನೆ ಕ್ರಮವನ್ನು ಎದುರಿಸಬೇಕಾಗುತ್ತದೆ.
ಅದಾನಿ ಗ್ರೀನ್ ಎನರ್ಜಿ ಆಗಿನ ವಿಶ್ವದ ಅತ್ಯಂತ ದೊಡ್ಡ ಸೌರ ವಿದ್ಯುತ್ ಆರ್ಡರ್‌ನ್ನು ಪಡೆದುಕೊಂಡ ಬಳಿಕ ಜನವರಿ 2021ರಲ್ಲಿ ಟೋಟಲ್ ಎನರ್ಜೀಸ್ ಅದಾನಿ ಗ್ರೀನ್‌ನಲ್ಲಿ ಶೇ.20ರಷ್ಟು ಪಾಲು ಬಂಡವಾಳವನ್ನು ಖರೀದಿಸಿತ್ತು.