ಆದಿವಾಸಿ ಜಾತಿಯಲ್ಲ: ಜಾರ್ಖಂಡ್ ಹೈಕೋರ್ಟ್

ಜಾರ್ಖಂಡ್ ಹೈಕೋರ್ಟ್ | PTI
ರಾಂಚಿ: ಮಹಿಳೆಯನ್ನು ‘‘ಹುಚ್ಚು ಆದಿವಾಸಿ’’ ಎಂದು ಕರೆದ ಸರಕಾರಿ ಅಧಿಕಾರಿ ವಿರುದ್ಧ ದಾಖಲಾಗಿದ್ದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯ ಎಫ್‌ಐಆರ್ ಅನ್ನು ಜಾರ್ಖಂಡ್ ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ ಹಾಗೂ ‘‘ಆದಿವಾಸಿ’’ ಪದ ಜಾತಿಯಲ್ಲ ಎಂದು ಅಭಿಪ್ರಾಯಿಸಿದೆ.
ನ್ಯಾಯಮೂರ್ತಿ ಅನಿಲ್ ಕುಮಾರ್ ಜೌಧರಿ ಆದೇಶ ನೀಡುವ ಸಂದರ್ಭ ಸಂವಿಧಾನ (ಪರಿಶಿಷ್ಟ ಜಾತಿ)ದ ಆದೇಶ ಅಥವಾ ರಾಷ್ಟ್ರಪತಿಯ ಸಂಬಂಧಿತ ಅಧಿಸೂಚನೆಯಲ್ಲಿ ಅವರ ಜಾತಿ ಅಥವಾ ಪಂಗಡವನ್ನು ನಿರ್ದಿಷ್ಟವಾಗಿ ಉಲ್ಲೇಖಿಸದೇ ಇದ್ದರೆ, ಅವರನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಸದಸ್ಯರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ದುಮ್ಕಾದಲ್ಲಿ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ರಾಜ್ಯ ಸರಕಾರದ ಅಧಿಕಾರಿ ಸುನೀಲ್ ಕುಮಾರ್ ಸಲ್ಲಿಸಿದ ಕ್ರಿಮಿನಲ್ ರಿಟ್ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.
ಕುಮಾರ್ ಅವರು ಕೋಪಗೊಂಡರು ಹಾಗೂ ಸುನಿತಾ ಮರಾಂಡಿ ಅವರ ಆರ್‌ಟಿಐ ಅರ್ಜಿ ಸ್ವೀಕರಿಸಲು ನಿರಾಕರಿಸಿದರು. ‘‘ಹುಚ್ಚು ಆದಿವಾಸಿಗಳು. ಕಿರಿಕಿರಿ ಮಾಡಲು ಬರುತ್ತಾರೆ’’ ಎಂದು ಹೇಳಿದ್ದರು. ಅಸಭ್ಯವಾಗಿ ವರ್ತಿಸಿದ್ದರು. ಅಶ್ಲೀಲ ಭಾಷೆ ಬಳಸಿದ್ದರು. ಅನಂತರ ಕಚೇರಿಯಿಂದ ಹೊರಗೆ ತಳ್ಳಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.