ಆದಿವಾಸಿ ಮಧು ಹತ್ಯೆ ಪ್ರಕರಣ: 12 ಅಪರಾಧಿಗಳಿಗೆ ಜಾಮೀನು ನಿರಾಕರಿಸಿದ ಕೇರಳ ಹೈಕೋರ್ಟ್

Update: 2023-11-16 20:18 IST
ಆದಿವಾಸಿ ಮಧು ಹತ್ಯೆ ಪ್ರಕರಣ: 12 ಅಪರಾಧಿಗಳಿಗೆ ಜಾಮೀನು ನಿರಾಕರಿಸಿದ ಕೇರಳ ಹೈಕೋರ್ಟ್

Photo cradit :  www.thenewsminute.com

  • whatsapp icon

ತಿರುವನಂತಪುರಂ: 2018ರಲ್ಲಿ ಆದಿವಾಸಿ ಯುವಕನಾದ ಮಧು ಮೇಲೆ ಬರ್ಬರವಾಗಿ ಹಲ್ಲೆ ನಡೆಸಿ ಹತ್ಯೆಗೈದ ಆರೋಪದಲ್ಲಿ ಅಪರಾಧ ಸಾಬೀತಾಗಿದ್ದ 13 ಮಂದಿ ಅಪರಾಧಿಗಳ ಪೈಕಿ 12 ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಲು ಬುಧವಾರ ಕೇರಳ ಹೈಕೋರ್ಟ್ ನಿರಾಕರಿಸಿದೆ ಎಂದು thenewsminute.com ವರದಿ ಮಾಡಿದೆ.

ಪ್ರಥಮ ಆರೋಪಿಗೆ ಜಾಮೀನು ಮಂಜೂರು ಮಾಡಿ ಹಾಗೂ ಶಿಕ್ಷೆಯನ್ನು ಅಮಾನತಿನಲ್ಲಿಡುವುದನ್ನು ಪರಿಗಣಿಸಿದ ಹೈಕೋರ್ಟ್, ಆತ ಆ ಘಟನೆಯಲ್ಲಿ ತಡವಾಗಿ ಸೇರಿಕೊಂಡಿದ್ದ ಹಾಗೂ ಮಧುವಿಗೆ ಕಿರುಕುಳ ನೀಡಿ, ಬೆತ್ತಲೆ ಮರವಣಿಗೆ ಮಾಡಿಸಿದ ಕೃತ್ಯದಲ್ಲಿ ಆತನ ಪಾತ್ರವಿರಲಿಲ್ಲ ಎಂಬ ವಿಚಾರವನ್ನು ಗಣನೆಗೆ ತೆಗೆದುಕೊಂಡಿತು.

ಇದಕ್ಕೂ ಮುನ್ನ, ಏ.4ರಂದು ಪಾಲಕ್ಕಾಡ್ ಜಿಲ್ಲೆಯ ಮನ್ನರ್ ಕಾಡ್ ನ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯ್ದೆಯ ವಿಶೇಷ ನ್ಯಾಯಾಲಯವು, 13 ಮಂದಿ ಅಪರಾಧಿಗಳಿಗೆ ಏಳು ವರ್ಷಗಳ ಕಠಿಣ ಸೆರೆವಾಸ ಶಿಕ್ಷೆಯನ್ನು ವಿಧಿಸಿತ್ತು. ಈ ಶಿಕ್ಷೆಯನ್ನು ಅಮಾನತುಗೊಳಿಸಬೇಕು ಎಂದು ಅಪರಾಧಿಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾ. ಪಿ.ಬಿ.ಸುರೇಶ್ ಕುಮಾರ್ ಹಾಗೂ ನ್ಯಾ. ಪಿ.ಜಿ.ಅಜಿತ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವು ನಡೆಸಿತು.

ಪ್ರಕರಣದ ಮೊದಲ ಅಪರಾಧಿ ಹುಸೈನ್ ಗೆ ಜಾಮೀನು ಮಂಜೂರು ಮಾಡಿದ ನ್ಯಾಯಪೀಠವು, ಉಳಿದ ಅಪರಾಧಿಗಳಾದ ಮರಕ್ಕರ್ (ಎ2), ಶಂಶುದ್ದೀನ್ (ಎ3), ರಾಧಾಕೃಷ್ಣನ್ (ಎ4), ಅಬೂಬಕ್ಕರ್ (ಎ5), ಸಿದ್ದಿಕ್ (ಎ6), ಉಬೈದ್ (ಎ7), ನಜೀಬ್ (ಎ8), ಜೈಜುಮನ್ (ಎ9), ಸಜೀವ್ (ಎ10), ಸತೀಶ್ (ಎ11), ಹರೀಶ್ (ಎ12) ಹಾಗೂ ಬಿಜು (ಎ13) ಅವರಿಗೆ ಜಾಮೀನು ನಿರಾಕರಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News