ನಕಲಿ ಓಆರ್‌ಎಸ್, ಪನೀರ್ ಬಳಿಕ ಈಗ ಕಾಂಕ್ರೀಟ್ ಬೆಳ್ಳುಳ್ಳಿ!

Update: 2024-08-20 10:52 GMT

PC : X 

ಮುಂಬೈ: ನಕಲಿ ವಸ್ತುಗಳು ಭಾರತೀಯ ಮಾರುಕಟ್ಟೆಯಲ್ಲಿ ಅವ್ಯಾಹತವಾಗಿ ಮುಂದುವರಿದಿದ್ದು, ಓಆರ್‌ಎಸ್, ಪನೀರ್ ಮತ್ತು ಬೆಣ್ಣೆಯ ಬಳಿಕ ಇದೀಗ ನಕಲಿ ಬೆಳ್ಳುಳ್ಳಿ ಮಹಾರಾಷ್ಟ್ರದ ಅಕೋಲಾ ಮಾರುಕಟ್ಟೆಯಲ್ಲಿ ಕಂಡುಬಂದಿದೆ.

ʼಝೀ 24 ತಾಸ್ʼ ವರದಿಯ ಪ್ರಕಾರ ನಿವೃತ್ತ ಪೊಲೀಸ್ ಅಧಿಕಾರಿ ಸುಭಾಷ್ ಪಾಟೀಲ್ ಅವರ ಪತ್ನಿಗೆ ಸಿಮೆಂಟ್‍ನಿಂದ ಮಾಡಿರುವ ಬೆಳ್ಳುಳ್ಳಿ ಸಿಕ್ಕಿದೆ. ಅಕೋಲಾ ಮಾರುಕಟ್ಟೆಯಲ್ಲಿ ಬೀದಿಬದಿ ವ್ಯಾಪಾರಿಯೊಬ್ಬರಿಂದ ಇವರು 250 ಗ್ರಾಂ ಬೆಳ್ಳುಳ್ಳಿ ಖರೀದಿಸಿದ್ದರು. ಮನೆಗೆ ತಂದು ಅದನ್ನು ಸುಲಿಯಲು ಸಾಧ್ಯವಾಗದೇ ಕತ್ತರಿಸಲು ಮುಂದಾಗಿದ್ದಾರೆ. ಆಗ ಅವರಿಗೆ ಕಂಡುಬಂದದ್ದು ಹೊರಗಿನಿಂದ ಬಿಳಿಯ ಲೇಪನವಿದ್ದ ಸಿಮೆಂಟ್ ತುಂಡು. ಇಂಥ ನಕಲಿ ಬೆಳ್ಳುಳ್ಳಿಯನ್ನು ಮಾರಾಟ ಮಾಡುವ ಮೂಲಕ ಜನತೆಯನ್ನು ದಿಕ್ಕುತಪ್ಪಿಸಲಾಗುತ್ತಿದೆ ಮತ್ತು ಇದರಿಂದ ಸಾರ್ವಜನಿಕ ಆರೋಗ್ಯಕ್ಕೂ ಅಪಾಯ ಎಂದು ವಿಡಿಯೊದಲ್ಲಿ ಪಾಟೀಲ್ ಆಪಾದಿಸಿದ್ದಾರೆ.

ಬೆಳ್ಳುಳ್ಳಿ ಬೆಲೆ ಕೆಜಿಗೆ 300 ರಿಂದ 350 ರೂಪಾಯಿ ತಲುಪಿರುವ ಹಿನ್ನೆಲೆಯಲ್ಲಿ ನಕಲಿ ದಂಧೆ ವ್ಯಾಪಕವಾಗಿ ನಡೆಯುತ್ತಿದೆ ಎಂದು ಹೇಳಲಾಗಿದೆ.

ಗ್ರಾಹಕರು ಸುರಕ್ಷಿತವಾಗಿ ಬೆಳ್ಳುಳ್ಳಿಯಂಥ ವಸ್ತುಗಳನ್ನು ಖರೀದಿಸಲು ಯಾವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಸಲಹೆ ನೀಡಿರುವ ಗ್ಲೆನ್‍ಈಗಲ್ಸ್ ಆಸ್ಪತ್ರೆಯ ವೈದ್ಯ ಡಾ.ಹರಿಚರಣ್ ಜಿ, "ನಿಜವಾದ ಬೆಳ್ಳುಳ್ಳಿ ಒಂದೇ ಗಾತ್ರದಲ್ಲಿರುವುದಿಲ್ಲ ಮತ್ತು ತೆಳುವಾದ ಸಿಪ್ಪೆ ಹೊಂದಿರುತ್ತದೆ. ಸುಲಭವಾಗಿ ಇದನ್ನು ತೆಗೆಯಬಹುದು. ಆದರೆ ನಕಲಿ ಬೆಳ್ಳುಳ್ಳಿ ಒಂದೇ ಗಾತ್ರದಲ್ಲಿದ್ದು, ಮೇಲೆ ನಯವಾದ, ದಪ್ಪ ಸಿಪ್ಪೆ ಹೊಂದಿರುತ್ತದೆ. ಇದನ್ನು ಸುಲಿಯಲು ಸಾಧ್ಯವಿಲ್ಲ. ಜತೆಗೆ ನಿಜವಾದ ಬೆಳ್ಳುಳ್ಳಿಯ ಘಾಟು ಅಧಿಕವಿದ್ದು, ಇದು ದಟ್ಟ ಹಾಗೂ ದೃಢವಾಗಿರುವುದರಿಂದ ನೀರಿನಲ್ಲಿ ಮುಳುಗುತ್ತದೆ. ನಕಲಿ ಬೆಳ್ಳುಳ್ಳಿ ಕೃತಕ ಸಂಯೋಜನೆ ಇರುವುದರಿಂದ ತೇಲುತ್ತದೆ ಎಂದು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News