ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮೋದಿ ಶ್ಲಾಘಿಸಿದ ಬೆನ್ನಿಗೇ ನಾಯಕತ್ವ ಕೊರತೆ ಕುರಿತು ಶ್ವೇತಪತ್ರ ಬಿಡುಗಡೆ
ಹೊಸದಿಲ್ಲಿ: ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನೇತಾರ ಡಾ.ಮನಮೋಹನ್ ಸಿಂಗ್ ನಮಗೆಲ್ಲ ಸ್ಫೂರ್ತಿ ಎಂದು ಇಂದು ಬೆಳಗ್ಗೆ ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಅವರ ದೀರ್ಘಾಯಸ್ಸಿಗೆ ಪ್ರಾರ್ಥಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಡಾ. ಮನಮೋಹನ್ ಸಿಂಗ್ ನೇತೃತ್ವದ 10 ವರ್ಷಗಳ ಯುಪಿಎ ಆಡಳಿತದಲ್ಲಿನ ಆರ್ಥಿಕ ಪರಿಸ್ಥಿತಿ ಹಾಗೂ ನರೇಂದ್ರ ಮೋದಿ ನೇತೃತ್ವದ 10 ವರ್ಷದ ಎನ್‌ಡಿಎ ಆಡಳಿತದಲ್ಲಿನ ಆರ್ಥಿಕ ಪರಿಸ್ಥಿತಿಯನ್ನು ಹೋಲಿಕೆ ಮಾಡಿ ಸರ್ಕಾರವು ಶ್ವೇತ ಪತ್ರ ಬಿಡುಗಡೆಗೊಳಿಸಿದೆ. ಆ ಮೂಲಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಾಯಕತ್ವದ ಕೊರತೆ ವಿರುದ್ಧ ವಾಗ್ದಾಳಿ ನಡೆಸಲಾಗಿದ್ದು, ಸುಗ್ರೀವಾಜ್ಞೆಯೊಂದನ್ನು ಸಾರ್ವಜನಿಕವಾಗಿ ಹರಿದು ಹಾಕುವ ಮೂಲಕ, ಅವರ ನಾಯಕತ್ವದ ಕೊರತೆಯು ಸಾರ್ವಜನಿಕವಾಗಿ ಬಟಾಬಯಲಾಗಿದೆ ಎಂದು ಟೀಕಿಸಲಾಗಿದೆ ಎಂದು ndtv.com ವರದಿ ಮಾಡಿದೆ.
ಈ ಶ್ವೇತಪತ್ರವು 2013ಕ್ಕೆ ಸಂಬಂಧಿಸಿದ್ದಾಗಿದ್ದು, ಅನೂರ್ಜಿತಗೊಂಡಿರುವ ದೋಷಿ ಸಂಸದರು ಹಾಗೂ ಶಾಸಕರ ವಿರುದ್ಧದ ತೀರ್ಪನ್ನು ತಡೆ ಹಿಡಿಯುವ ಸುಗ್ರೀವಾಜ್ಞೆಯನ್ನು ಜಾರಿ ಮಾಡಿದ್ದ ಡಾ. ಮನಮೋಹನ್ ಸಿಂಗ್ ಅವರ ನಿರ್ಧಾರವನ್ನು ಆಗಿನ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸುಗ್ರೀವಾಜ್ಞೆಯ ಪ್ರತಿಯನ್ನು ಹರಿದು ಹಾಕುವ ಮೂಲಕ ವಿರೋಧಿಸಿದ್ದರ ಕುರಿತು ಪ್ರಸ್ತಾಪಿಸಿದೆ. ನಂತರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಆ ಸುಗ್ರೀವಾಜ್ಞೆಯನ್ನು ಹಿಂಪಡೆದಿತ್ತು.
ವಾಜಪೇಯಿ ಸರ್ಕಾರದ ಅವಧಿಯಲ್ಲಿ ಆರೋಗ್ಯಕರವಾಗಿದ್ದ ಆರ್ಥಿಕತೆಯನ್ನು ಹಾಳುಗೆಡವಿದ್ದಕ್ಜೆ ಕಾಂಗ್ರೆಸ್ ಹೊಣೆ ಎಂದು ಆರೋಪಿಸಿರುವ ಶ್ವೇತ ಪತ್ರವು, ಸುಸ್ಥಿತಿಯಲ್ಲಿಲ್ಲದ ಆರ್ಥಿಕತೆಯನ್ನು ಮೋದಿ ಆಡಳಿತಕ್ಕೆ ಹಸ್ತಾಂತರಿಸಲಾಯಿತು ಎಂದೂ ದೂರಿದೆ. ಆ ಮೂಲಕ ಯುಪಿಎ ಸರ್ಕಾರವು ಅಧಿಕಾರದಲ್ಲಿದ್ದಾಗ ನಾಯಕತ್ವದ ಕೊರತೆ ಇದ್ದುದರಿಂದಲೇ ಭಾರತದ ಆರ್ಥಿಕತೆಯ ಆರೋಗ್ಯ ಹದಗೆಟ್ಟಿತ್ತು ಎಂದು ಪದೇ ಪದೇ ಪ್ರಸ್ತಾಪಿಸಲಾಗಿದೆ.
ಹೀಗಿದ್ದೂ, ಶ್ವೇತ ಪತ್ರದಲ್ಲೆಲ್ಲಿಯೂ ಡಾ. ಮನಮೋಹನ್ ಸಿಂಗ್ ಅವರ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಬದಲಿಗೆ, ಅವರ ನೇತೃತ್ವದ ಯುಪಿಎ ಸರ್ಕಾರ ಎಂದು ವ್ಯಾಖ್ಯಾನಿಸಲಾಗಿದೆ. ಬಾಹ್ಯ ಉಲ್ಲೇಖವೊಂದರಲ್ಲಿ ಮಾತ್ರ ಡಾ. ಮನಮೋಹನ್ ಸಿಂಗ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.