ಚಂದ್ರಯಾನ-2ರ ವೈಫಲ್ಯದ ಬಳಿಕ ಎಲ್ಲವನ್ನೂ ಹೊಸದಾಗಿ ಆರಂಭಿಸಬೇಕಾಗಿತ್ತು: ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್
ಹೊಸದಿಲ್ಲಿ: 2019ರಲ್ಲಿ ಚಂದ್ರಯಾನ- 2ರ ಲ್ಯಾಂಡರ್ ಚಂದ್ರನ ನೆಲವನ್ನು ನಿಧಾನವಾಗಿ ಸ್ಪರ್ಶಿಸದೆ, ಅತ್ಯಂತ ವೇಗವಾಗಿ ಅಪ್ಪಳಿಸಿತ್ತು. ಹಾಗಾಗಿ, ಅಲ್ಲಿ ಹೆಕ್ಕಲು ಏನೂ ಉಳಿದಿರಲಿಲ್ಲ. ಈ ಯೋಜನೆಗೆ ಎಲ್ಲವನ್ನೂ ಹೊಸದಾಗಿ ಆರಂಭಿಸಬೇಕಾಗಿತ್ತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ.
“ಚಂದ್ರಯಾನ-2ರಲ್ಲಿ ಏನು ತಪ್ಪು ಸಂಭವಿಸಿತು ಎನ್ನುವುದನ್ನು ಪತ್ತೆಹಚ್ಚುವಲ್ಲಿ ಒಂದು ವರ್ಷ ಕಳೆಯಿತು. ಮುಂದಿನ ವರ್ಷ ನಾವು ಪ್ರತಿಯೊಂದನ್ನೂ ಪರಿಷ್ಕರಿಸಿದೆವು. ಕಳೆದ ಎರಡು ವರ್ಷಗಳಲ್ಲಿ ನಾವು ಪರೀಕ್ಷೆಗಳನ್ನು ನಡೆಸಿದೆವು’’ ಎಂದು ಸಂದರ್ಶನವೊಂದರಲ್ಲಿ ಅವರು ತಿಳಿಸಿದರು.
ಈ ನಡುವೆ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಇಸ್ರೋ ಭಾರೀ ಸಮಸ್ಯೆಯನ್ನು ಎದುರಿಸಿತು ಎಂದು ಅವರು ಹೇಳಿದರು.
“ನಮ್ಮ ಕೆಲವು ಕಾರ್ಯಕ್ರಮಗಳಿಗೆ ಕೋವಿಡ್ ಹಿನ್ನಡೆಯಾಯಿತು. ಆದರೂ, ನಾವು ಕೆಲವು ರಾಕೆಟ್‌ಗಳನ್ನು ಉಡಾಯಿಸಿದೆವು. ಕೋವಿಡ್ ಬಳಿಕ, ನಾವು ಮರಳಿ ಹಳಿಗೆ ಬಂದಿದ್ದೇವೆ’’ ಎಂದು ಸೋಮನಾಥ್ ನುಡಿದರು.
“ಚಂದ್ರಯಾನ- 3ರಲ್ಲಿರುವ ಪ್ರತಿಯೊಂದು ಉಪಕರಣವನ್ನೂ ಚಂದ್ರನ ದಕ್ಷಿಣ ಧ್ರುವದಲ್ಲಿ ಅಥವಾ ಅದರ ಸಮೀಪದಲ್ಲಿ ನೆಲಸ್ಪರ್ಶಕ್ಕಾಗಿ ಸಿದ್ಧಪಡಿಸಲಾಗಿದೆ. ದಕ್ಷಿಣ ಧ್ರುವದಲ್ಲಿ ಅಗಾಧ ಪ್ರಮಾಣದ ವೈಜ್ಞಾನಿಕ ಸಂಶೋಧನೆಗಳಿಗೆ ಅವಕಾಶವಿದೆ. ನೀರು ಮತ್ತು ಖನಿಜಗಳ ಲಭ್ಯತೆಯ ಮೇಲೆ ಎಲ್ಲಾ ಸಂಶೋಧನೆಗಳು ಕೇಂದ್ರೀಕೃತವಾಗಿವೆ’’ ಎಂದು ಅವರು ಹೇಳಿದರು.
ನೆಲಸ್ಪರ್ಶಕ್ಕೆ ದಕ್ಷಿಣ ಧ್ರುವವನ್ನೇ ಯಾಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ಪ್ರಶ್ನೆಗೆ ಅವರು ಈ ರೀತಿಯಾಗಿ ಉತ್ತರಿಸಿದರು.
“ಅಲ್ಲಿನ ಇತರ ಹಲವಾರು ಭೌತಿಕ ಪ್ರಕ್ರಿಯೆಗಳನ್ನೂ ಅಧ್ಯಯನಕ್ಕೆ ಒಳಪಡಿಸಲು ವಿಜ್ಞಾನಿಗಳು ಬಯಸಿದ್ದಾರೆ. ಆ ಪ್ರದೇಶಗಳ ಸಂಶೋಧನೆಗಾಗಿಯೇ ನಮ್ಮ ಐದು ಉಪಕರಣಗಳನ್ನು ಸಿದ್ಧಪಡಿಸಲಾಗಿದೆ’’ ಎಂದರು.