ತಮಿಳುನಾಡು ರಾಜ್ಯಪಾಲರಿಗೆ ಸಂಬಂಧಿಸಿದ ತೀರ್ಪು ಕೇರಳದ ರಾಜ್ಯಪಾಲರಿಗೆ ಅನ್ವಯಿಸುವುದಿಲ್ಲ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಸಾಲಿಸಿಟರ್ ಜನರಲ್

Photo credit: PTI
ಹೊಸದಿಲ್ಲಿ: ʼತಮಿಳುನಾಡು ರಾಜ್ಯಪಾಲರಿಗೆ ಸಂಬಂಧಿಸಿದ ತೀರ್ಪು ಕೇರಳದ ರಾಜ್ಯಪಾಲರಿಗೆ ಅನ್ವಯಿಸುವುದಿಲ್ಲʼ ಎಂದು ಮಸೂದೆಗಳಿಗೆ ಅಂಕಿತ ಹಾಕಲು ಅನಗತ್ಯ ವಿಳಂಬ ಪ್ರಶ್ನಿಸಿ ಕೇರಳ ಸರಕಾರ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದಾರೆ.
ತಮಿಳುನಾಡು ರಾಜ್ಯ ವಿಧಾನಸಭೆಯಲ್ಲಿ ಅನುಮೋದನೆಗೊಂಡಿದ್ದ ಮಸೂದೆಗಳಿಗೆ ಅಂಕಿತ ಹಾಕದೆ ರಾಜ್ಯಪಾಲ ಎನ್.ರವಿ ವಿಳಂಬ ತೋರಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಕುರಿತು ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ವ್ಯಾಪ್ತಿಗೆ ಕೇರಳ ಕೇರಳ ರಾಜ್ಯಪಾಲರೂ ಒಳಪಡುತ್ತಾರೆ ಎಂಬ ಕೇರಳ ಸರಕಾರದ ವಾದವನ್ನು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರಬಲವಾಗಿ ವಿರೋಧಿಸಿದರು ಎಂದು barandbench.com ವರದಿ ಮಾಡಿದೆ.
ಕೇರಳ ರಾಜ್ಯ ವಿಧಾನಸಭೆ ಅಂಗೀಕರಿಸಿದ್ದ ಮಸೂದೆಗಳಿಗೆ ಅಂಕಿತ ಹಾಕಲು ಈ ಹಿಂದಿನ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ವಿಳಂಬ ಮಾಡುತ್ತಿದ್ದಾರೆ ಮತ್ತು ರಾಜ್ಯಪಾಲರು ಶಿಫಾರಸು ಮಾಡಿದ್ದ ಏಳು ಮಸೂದೆಗಳನ್ನು ತಡೆ ಹಿಡಿಯುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ನಿರ್ಧಾರವನ್ನು ಪ್ರಶ್ನಿಸಿ 2024ರಲ್ಲಿ ಕೇರಳ ಸರಕಾರ ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆಯನ್ನು ಮಂಗಳವಾರ ನ್ಯಾ. ಪಿ.ಎಸ್.ನರಸಿಂಹ ಹಾಗೂ ನ್ಯಾ. ಜೋಯ್ ಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ನಡೆಸಿತು.
ವಿಚಾರಣೆಯ ವೇಳೆ, ಕೇರಳ ಸರಕಾರದ ಪರ ಹಿರಿಯ ವಕೀಲ ಕೆ.ಕೆ.ವೇಣುಗೋಪಾಲ್ ಅವರನ್ನುದ್ದೇಶಿಸಿ, ನಿಮ್ಮನ್ನು ನೋಡಿದಾಗಲೆಲ್ಲ ನಿಮ್ಮನ್ನು ಅಟಾರ್ನಿ ಜನರಲ್ ಎಂದು ಕರೆಯುವುದು ನಮಗೆ ಅಭ್ಯಾಸವಾಗಿ ಹೋಗಿದೆ ಎಂದು ನ್ಯಾಯಪೀಠ ಲಘು ಧಾಟಿಯಲ್ಲಿ ಹಾಸ್ಯ ಮಾಡಿತು.
ಈ ವೇಳೆ ಕೇರಳ ಸರಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಕೆ.ವೇಣುಗೋಪಾಲ್, “ಈ ಎರಡೂ ಅರ್ಜಿಗಳು ಇತ್ತೀಚಿಗೆ ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವ್ಯಾಪ್ತಿಗೆ ಒಳಪಡುತ್ತವೆ. ಮಸೂದೆಗಳಿಗೆ ಅಂಕಿತ ಹಾಕಲು ರಾಷ್ಟ್ರಪತಿಗಳಿಗೆ ಮೂರು ತಿಂಗಳ ಗಡುವು ವಿಧಿಸಲಾಗಿದೆ. ಇದು ಬಿಟ್ಟು ಬೇರಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದು ಪ್ರತಿಪಾದಿಸಿದರು.
ಕೇರಳ ಸರಕಾರದ ಪರ ವಕೀಲ ಕೆ.ಕೆ.ವೇಣುಗೋಪಾಲ್ ಮಂಡಿಸಿದ ವಾದವನ್ನು ವಿರೋಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಾಲಿ ಪ್ರಕರಣ ಹಾಗೂ ತಮಿಳುನಾಡು ರಾಜ್ಯಪಾಲರ ಪ್ರಕರಣದ ನಡುವಿನ ವ್ಯತ್ಯಾಸದ ಕುರಿತು ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದರು.
ನಂತರ, “ತಮಿಳುನಾಡು ರಾಜ್ಯಪಾಲರ ಪ್ರಕರಣದ ಕುರಿತು ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವ್ಯಾಪ್ತಿಗೆ ಈ ಪ್ರಕರಣವು ಒಳಪಡುವುದಿಲ್ಲ” ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿವಾದ ಮಂಡಿಸಿದರು.
ತುಷಾರ್ ಮೆಹ್ತಾರ ವಾದಕ್ಕೆ ಬೆಂಬಲ ಸೂಚಿಸಿದ ಅಟಾರ್ನಿ ಜನರಲ್ ವೆಂಕಟರಮಣಿ, “ಈ ಪ್ರಕರಣದಲ್ಲಿನ ವಾಸ್ತವಾಂಶವು ಮೂಲಭೂತವಾಗಿ ಸಂಪೂರ್ಣವಾಗಿ ವಿಭಿನ್ನವಾಗಿರುವುದರಿಂದ, ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವ್ಯಾಪ್ತಿಗೆ ಈ ಪ್ರಕರಣ ಒಳಪಡುವುದಿಲ್ಲ” ಎಂದು ಪ್ರತಿಪಾದಿಸಿದರು.
ಈ ನಡುವೆ, ತಮಿಳುನಾಡು ರಾಜ್ಯಪಾಲರ ಪ್ರಕರಣದಲ್ಲಿನ ತೀರ್ಪಿನ ವ್ಯಾಪ್ತಿಗೆ ಈ ಪ್ರಕರಣವೂ ಒಳಪಡುವುದರಿಂದ, ಸಂವಿಧಾನದ ವಿಧಿ 200ರ ಅಡಿ ರಾಜ್ಯಪಾಲರೊಬ್ಬರ ಕಾರ್ಯನಿರ್ವಹಣೆ ಹೇಗಿರಬೇಕು ಎಂಬ ಕುರಿತು ನಿರ್ದಿಷ್ಟ ಮಾರ್ಗಸೂಚಿ ಹೊರಡಿಸಬೇಕು ಎಂದು ಕೋರಿ ಸಲ್ಲಿಸಿದ್ದ ತಿದ್ದುಪಡಿ ಅರ್ಜಿಯನ್ನು ಕೇರಳ ಸರಕಾರ ಹಿಂಪಡೆಯುತ್ತಿದೆ ಎಂದು ಕೇರಳ ಸರಕಾರದ ಪರ ವಕೀಲ ಕೆ.ಕೆ.ವೇಣುಗೋಪಾಲ್ ನ್ಯಾಯಾಲಯಕ್ಕೆ ತಿಳಿಸಿದರು.
ಪ್ರಕರಣದ ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಲಾಗಿದೆ.