ಫ್ಯಾಕ್ಟ್ ಚೆಕ್ | AI ವೀಡಿಯೊ ರಚಿಸಿ ಲಾಸ್ ಏಂಜಲೀಸ್ ನಲ್ಲಿ ಕಾಡ್ಗಿಚ್ಚಿನಿಂದ ಮಸೀದಿಗೆ ಹಾನಿಯಾಗಿಲ್ಲ ಎಂದು ವೈರಲ್
ಲಾಸ್ ಏಂಜಲೀಸ್ : ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ನಲ್ಲಿ ವಿನಾಶಕಾರಿ ಕಾಡ್ಗಿಚ್ಚಿನ ನಡುವೆ ‘ನೂರುಲ್ ಅಮಾನ್’ ಹೆಸರಿನ ಶ್ವೇತವರ್ಣದ ಮಸೀದಿಯು ಯಾವುದೇ ಹಾನಿಗೀಡಾಗದೆ ಉಳಿದುಕೊಂಡಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊವೊಂದು ಸುಳ್ಳನ್ನು ಬಿಂಬಿಸುತ್ತಿದೆ. ಲಾಸ್ ಏಂಜಲೀಸ್ ನಲ್ಲಿ ಇಂತಹ ಯಾವುದೇ ಮಸೀದಿಯಿಲ್ಲ ಹಾಗು ಈ ವೀಡಿಯೊ ಎಐ-ರಚಿತವಾಗಿದ್ದು, ಸಂಪೂರ್ಣ ಸುಳ್ಳು ಎನ್ನುವುದನ್ನು ತನಿಖೆಗಳು ಬಹಿರಂಗಗೊಳಿಸಿವೆ.
ವಾಸ್ತವದಲ್ಲಿ ಲಾಸ್ ಏಂಜಲೀಸ್ ಪ್ರದೇಶವನ್ನು ಆವರಿಸಿಕೊಂಡಿರುವ ಕಾಡ್ಗಿಚ್ಚಿನಿಂದ ಹಲವಾರು ವರ್ಷಗಳಿಂದ ಆರಾಧನೆಯ ಪ್ರಮುಖ ತಾಣ ಮತ್ತು ಸಮುದಾಯ ಕೇಂದ್ರವಾಗಿದ್ದ ‘ಮಸ್ಜಿದ್ ತಕ್ವಾ’ ಹೆಸರಿನ ಮಸೀದಿಯು ನಾಶಗೊಂಡಿದೆ. ‘ಡೆವಿಲ್ಸ್ ವಿಂಡ್’ ಎಂದು ಕರೆಯಲಾಗುವ ಒಣ ಮರುಭೂಮಿ ಗಾಳಿಯಿಂದಾಗಿ ಉಲ್ಬಣಿಸಿದ ಬೆಂಕಿಯ ಜ್ವಾಲೆಗಳಿಂದಾಗಿ ಮಂಗಳವಾರ ರಾತ್ರಿ ಮಸ್ಜಿದ್ ಅಲ್-ತಕ್ವಾ ಧರಾಶಾಹಿಯಾಗಿದೆ. ಶುಕ್ರವಾರದ ಪ್ರಾರ್ಥನೆಗಳಿಗಾಗಿ ಆಸ್ತಿಕರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಮಸೀದಿಯು ಈಗ ಸಂಪೂರ್ಣವಾಗಿ ನಾಶಗೊಂಡಿರುವುದನ್ನು ಇಮಾಂ ಜುನೈದ್ ಆಸಿ ದೃಢಪಡಿಸಿದ್ದಾರೆ.
ಲಾಸ್ ಏಂಜಲೀಸ್ ಅನ್ನು ತಲ್ಲಣಗೊಳಿಸಿರುವ ಕಾಡ್ಗಿಚ್ಚು ಈಗಾಗಲೇ ಕನಿಷ್ಠ 24 ಜೀವಗಳನ್ನು ಬಲಿ ತೆಗೆದುಕೊಂಡಿದೆ. 12,000 ಕ್ಕೂ ಅಧಿಕ ಕಟ್ಟಡಗಳು ನಾಶಗೊಂಡಿದ್ದು, ವ್ಯಾಪಕ ಹಾನಿಯನ್ನುಂಟು ಮಾಡಿದೆ. 135 ರಿಂದ 150 ಬಿಲಿಯನ್ ಡಾಲರ್ ಗಳ ನಷ್ಟ ಸಂಭವಿಸಿದೆಯೆಂದು ಅಂದಾಜಿಸಲಾಗಿದೆ.