ಎ.30 ರಂದು ವಕ್ಫ್ ಕಾನೂನು ವಿರುದ್ಧ ರಾತ್ರಿ 9ಕ್ಕೆ 15 ನಿಮಿಷ ದೀಪ ಆರಿಸಿ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕರೆ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ವಕ್ಫ್ (ತಿದ್ದುಪಡಿ) ಕಾಯ್ದೆ, 2025 ರ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB), ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ನಡೆಸುವ ರಾಜ್ಯಗಳಲ್ಲಿ ವಿಭಿನ್ನ ಪ್ರಚಾರ ತಂತ್ರವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಅದರ ಭಾಗವಾಗಿ ಎಪ್ರಿಲ್ 30 ರಂದು ರಾತ್ರಿ 9 ಗಂಟೆಗೆ 'ಬತ್ತಿ ಗುಲ್' ಎಂಬ ಹೆಸರಿನಲ್ಲಿ ದೇಶಾದ್ಯಂತ ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ 15 ನಿಮಿಷಗಳ ಕಾಲ ದೀಪಗಳನ್ನು ಆರಿಸಲು ಕರೆ ನೀಡಲಾಗಿದೆ.
ಇತ್ತೀಚೆಗೆ ಹೈದರಾಬಾದ್ ನಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (AIMIM) ಸಹಭಾಗಿತ್ವದಲ್ಲಿ ಆಯೋಜಿಸಿದ್ದ 'ವಕ್ಫ್ ಉಳಿಸಿ, ಸಂವಿಧಾನ ಉಳಿಸಿ' ಬೃಹತ್ ಸಾರ್ವಜನಿಕ ಸಭೆಯ ಕೆಲವು ದಿನಗಳ ನಂತರ ಈ ನಿರ್ಧಾರ ಬಂದಿದೆ.
ಬೃಹತ್ ಸಭೆಯಲ್ಲಿ ಕಾಂಗ್ರೆಸ್, ಭಾರತ ರಾಷ್ಟ್ರ ಸಮಿತಿ, ವೈಎಸ್ಆರ್ ಕಾಂಗ್ರೆಸ್ ಪಕ್ಷ ಮತ್ತು ಡಿಎಂಕೆ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳ ಸದಸ್ಯರು ಮತ್ತು ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.
ವಕ್ಫ್ ಉಳಿಸಿ ಅಭಿಯಾನದ ಮೊದಲ ಹಂತವು ಜುಲೈ 13 ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ. ಅದಕ್ಕೂ ಮೊದಲು, ನೂತನ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದನ್ನು ರದ್ದುಗೊಳಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ
ಅಭಿಯಾನದ ಸ್ವರೂಪ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಮಂಡಳಿಯು ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿನ ತನ್ನ ಘಟಕಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ. ಕಾರ್ಯಕ್ರಮವು ಪ್ರತಿಯೊಂದು ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಒತ್ತಿ ಹೇಳಿದೆ.
"ಎರಡನೇ ಮಾರ್ಗ ಸೂಚಿಯ ಪ್ರಕಾರ,ಸರ್ಕಾರಗಳು ಅಸಹಕಾರ ತೋರುವ ಮತ್ತು ಪರಿಸ್ಥಿತಿ ನಮಗೆ ಅನುಕೂಲಕರವಾಗಿಲ್ಲದ ರಾಜ್ಯಗಳಲ್ಲಿ, ನಾವು ರಸ್ತೆಗಳಲ್ಲಿ ಯಾವುದೇ ಸಾರ್ವಜನಿಕ ರ್ಯಾಲಿ ಮತ್ತು ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಬೇಕಾಗಿಲ್ಲ" ಎಂದು ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿಯ ವಕ್ತಾರ ಸಯ್ಯದ್ ಖಾಸಿಂ ರಸೂಲ್ ಇಲ್ಯಾಸ್ ಹೇಳಿದ್ದಾರೆ.
ಸಂಸತ್ತಿನಲ್ಲಿ ಮಸೂದೆ ಅಂಗೀಕಾರದ ನಂತರ ಜನರಲ್ಲಿ ಅಸಮಾಧಾನ ಇರುವುದರಿಂದ, ಬೀದಿಗಳಲ್ಲಿ ರ್ಯಾಲಿಗಳು ಮತ್ತು ಕಾರ್ಯಕ್ರಮಗಳು ನಡೆಯುವ ವೇಳೆ ಅನಗತ್ಯವಾಗಿ ಯಾರಾದರೂ ಪ್ರವೇಶಿಸಿ ಗೊಂದಲ ಸೃಷ್ಟಿಸಬಹುದು ಎಂಬ ಆತಂಕವಿದೆ ಎಂದು ಅವರು ಇಲ್ಯಾಸ್ ಹೇಳಿದ್ದಾರೆ.
ಪ್ರತಿಭಟನೆಗೆ ಅಸಹಕಾರ ತೋರುವ ರಾಜ್ಯಗಳೆಂದರೆ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಸರಕಾರ ನಡೆಸುವ ರಾಜ್ಯಗಳಾಗಿವೆ ಎಂದು ಇಲ್ಯಾಸ್ ಹೇಳಿದ್ದಾರೆ. ಎಲ್ಲಾ ಬಿಜೆಪಿ ಆಡಳಿತದ ರಾಜ್ಯಗಳು ಅಸಹಕಾರ ತೋರಲಿವೆ ಎಂದು ಹೇಳಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಮತ್ತು ಮಿತ್ರಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ, ಮಂಡಳಿಯು ಕಳೆದ ವಾರ ದಿಲ್ಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆಸಿದಂತಹ ಒಳಾಂಗಣ ಕಾರ್ಯಕ್ರಮಗಳನ್ನು ನಡೆಸುತ್ತದೆ. ದುಂಡು ಮೇಜಿನ ಸಭೆಗಳು, ಸಾಮಾನ್ಯ ಸಭೆಗಳು ಮತ್ತು ಸಂವಾದ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಿದೆ.
ರವಿವಾರ, ಮಹಾರಾಷ್ಟ್ರದ ಪರ್ಭಾನಿಯಲ್ಲಿ ಈ ರೀತಿಯ ಒಂದು ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು.
ಕಾರ್ಯಕ್ರಮದ ಸಮಯದಲ್ಲಿ ಯಾರದರೂ ಪ್ರಚೋದಿಸಲು ಪ್ರಯತ್ನಿಸಿದರೆ ಶಾಂತಿ ಕಾಪಾಡಿಕೊಳ್ಳಬೇಕು ಎಂದೂ ಮಾರ್ಗ ಸೂಚಿಯಲ್ಲಿ ಹೇಳಲಾಗಿದೆ.
ಕಾರ್ಯಕ್ರಮಗಳಲ್ಲಿ ಮುಸ್ಲಿಮರು ಮಾತ್ರ ಭಾಗವಹಿಸಬಾರದು ಎಂದು ಮಂಡಳಿಯು ನಿರ್ದೇಶಿಸಿದೆ; ಕಾನೂನಿನ ವಿರುದ್ಧದ ಹೋರಾಟದಲ್ಲಿ ಮಂಡಳಿಯನ್ನು ಬೆಂಬಲಿಸುವ ಇತರ ಧಾರ್ಮಿಕ ಸಮುದಾಯಗಳ ಪ್ರಮುಖರು ಭಾಗವಹಿಸುವಂತೆ ಮಾಡಬೇಕು ಎಂದು ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿಯು ಹೇಳಿದೆ.
ವಕ್ಫ್ ತಿದ್ದುಪಡಿ ಕಾನೂನು ಸಾಂವಿಧಾನಿಕ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ. ತಾರತಮ್ಯದಿಂದ ಕೂಡಿದೆ. ಈ ಕಾರಣದಿಂದ ನಾವು ಅದನ್ನು ವಿರೋಧಿಸುತ್ತಿದ್ದೇವೆ ಎಂದು AIMPLB ವಕ್ತಾರ ಸಯ್ಯದ್ ಖಾಸಿಂ ರಸೂಲ್ ಇಲ್ಯಾಸ್ ಹೇಳಿದ್ದಾರೆ.
ವಕ್ಫ್ ತಿದ್ದುಪಡಿ ಕಾನೂನಿಗೆ ವಿರೋಧವಿರುವ ರಾಜ್ಯಗಳಲ್ಲಿ ಸಾರ್ವಜನಿಕ ರ್ಯಾಲಿಗಳು ಮತ್ತು ಮಾನವ ಸರಪಳಿಗಳನ್ನು ಸಹ ಆಯೋಜಿಸಲಾಗುವುದು ಎಂದು ಇಲ್ಯಾಸ್ ಉಲ್ಲೇಖಿಸಿದ್ದಾರೆ.
ವಕ್ಫ್ ಕಾನೂನನ್ನು ರದ್ದುಗೊಳಿಸಲು ಮಂಡಳಿಯು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದೆ. ಎಪ್ರಿಲ್ 30 ರಂದು ರಾತ್ರಿ 9 ಗಂಟೆಗೆ 'ಬತ್ತಿ ಗುಲ್' ಎಂಬ ಹೆಸರಿನಲ್ಲಿ ದೇಶಾದ್ಯಂತ ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ 15 ನಿಮಿಷಗಳ ಕಾಲ ದೀಪಗಳನ್ನು ಆರಿಸಲು ಕರೆ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಅಸದುದ್ದೀನ್ ಉವೈಸಿ, "ಎ.30 ರಂದು ರಾತ್ರಿ 9 ಗಂಟೆಗೆ ದೀಪ ಆರಿಸಿ, ವಕ್ಫ್ ತಿದ್ದುಪಡಿ ಕಾನೂನಿನ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗೋಣ", ಎಂದು ಕರೆ ನೀಡಿದ್ದಾರೆ.
ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿಯು ಮೂರು ದಿನಗಳವರೆಗೆ ಅಭಿಯಾನವನ್ನು ಸ್ಥಗಿತಗೊಳಿಸಿತ್ತು.