ಗಗನಸಖಿ ಹತ್ಯೆ ಪ್ರಕರಣದ ಆರೋಪಿ ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆ
ಮುಂಬೈ: ಮುಂಬೈನ ಗಗನಸಖಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬ ಅಂಧೇರಿಯ ಪೊಲೀಸ್ ಠಾಣೆಯಲ್ಲಿ ತನ್ನ ಪ್ಯಾಂಟ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈನ ಮರೋಲ್ ಪ್ರದೇಶದಲ್ಲಿ ವಾಸಿಸುತ್ತಿದ್ದ 23 ವರ್ಷದ ಗಗನಸಖಿಯನ್ನು ಕೊಂದ ಆರೋಪದಲ್ಲಿ ವಿಕ್ರಂ ಅತ್ವಾಲ್ ಎಂಬ ಆರೋಪಿ ಬಂಧಿತನಾಗಿದ್ದ ಎಂದು hindustantimes.com ವರದಿ ಮಾಡಿದೆ.
ಆರೋಪಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಸೋಮವಾರ ಬೆಳಗ್ಗೆ ಅಂಧೇರಿ ಪೂರ್ವದಲ್ಲಿರುವ ತಮ್ಮ ಫ್ಲ್ಯಾಟ್ ನಲ್ಲಿ ರುಪಾಲ್ ಎಂಬ ಗಗನಸಖಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದರ ಬೆನ್ನಿಗೇ ಹತ್ಯೆಯ ಪ್ರಕರಣದಲ್ಲಿ ಆ ಅಪಾರ್ಟ್ ಮೆಂಟ್ ನ ಶುಚಿತ್ವ ಕೆಲಸಗಾರರ ಪೈಕಿ ಒಬ್ಬನಾಗಿದ್ದ ವಿಕ್ರಂ ಅತ್ವಾಲ್ ಎಂಬ ಆರೋಪಿಯನ್ನು ಪೊವೈ ಪೊಲೀಸರು ಬಂಧಿಸಿದ್ದರು.
ಕಳೆದ ಆರು ತಿಂಗಳ ಹಿಂದೆ ಛತ್ತೀಸ್ ಗಢದ ರಾಯ್ ಪುರದಿಂದ ಅಂಧೇರಿ ಪೂರ್ವದಲ್ಲಿರುವ ಎನ್‍ಜಿ ಸಂಕೀರ್ಣದಲ್ಲಿನ ಮೂರನೆ ಅಂತಸ್ತಿನ ಬಾಡಿಗೆ ಫ್ಲ್ಯಾಟ್ ಗೆ ಸಂತ್ರಸ್ತೆಯು ತನ್ನ ಹಿರಿಯ ಸಹೋದರಿ ಮತ್ತು ಗೆಳತಿಯೊಂದಿಗೆ ವಾಸ್ತವ್ಯ ಬದಲಿಸಿದ್ದರು. ಆದರೆ, ಘಟನೆ ನಡೆದ ಸಂದರ್ಭದಲ್ಲಿ ಆಕೆ ಅಪಾರ್ಟ್ ಮೆಂಟ್ ನಲ್ಲಿ ಒಂಟಿಯಾಗಿದ್ದರು ಎಂದು ಹೇಳಲಾಗಿದೆ.
ಸಂತ್ರಸ್ತೆಯು ಕೊನೆಯದಾಗಿ ರವಿವಾರ ಬೆಳಗ್ಗೆ ತನ್ನ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ, ಮರುದಿನದಿಂದ ಆಕೆಗೆ ಕರೆ ಮಾಡಿದರೂ, ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ನಂತರ ಮುಂಬೈ ನಗರದಲ್ಲೇ ವಾಸವಿರುವ ಆಕೆಯ ಗೆಳತಿಯನ್ನು ಸಂಪರ್ಕಿಸಿರುವ ಸಂತ್ರಸ್ತೆಯ ಕುಟುಂಬದ ಸದಸ್ಯರು, ಆಕೆಯ ಕುರಿತು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. “ಅವರು ಸುಮಾರು ರಾತ್ರಿ 9.30ರ ವೇಳೆಗೆ ಮನೆಯ ಬಳಿ ಬಂದಿದ್ದು, ಮನೆಯ ಬಾಗಿಲು ಒಳಗಿನಿಂದ ಬೀಗ ಹಾಕಿರುವುದನ್ನು ಕಂಡಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಹೋದಾಗ, ಭದ್ರತಾ ಸಿಬ್ಬಂದಿಯೊಬ್ಬರ ನೆರವನ್ನು ಪಡೆದು ಮನೆಯ ಬಾಗಿಲನ್ನು ಮುರಿದಿದ್ದಾರೆ” ಎಂದು ಪೊವೈ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹತ್ಯಾ ಪ್ರಕರಣ ದಾಖಲಾಗುತ್ತಿದ್ದಂತೆ ಎಂಟು ತನಿಖಾ ತಂಡಗಳನ್ನು ರಚಿಸಲಾಗಿತ್ತು. ಪರಿಪೂರ್ಣ ತಾಂತ್ರಿಕ ತನಿಖೆ ಹಾಗೂ ಹಲವಾರು ವ್ಯಕ್ತಿಗಳ ವಿಚಾರಣೆ ಮುಕ್ತಾಯಗೊಂಡ ನಂತರ, ಪೊಲೀಸರು ಶಂಕಿತರ ಸಂಕ್ಷಿಪ್ತ ಪಟ್ಟಿಯನ್ನು ತಯಾರಿಸಿದ್ದರು. ನಂತರ 40 ವರ್ಷ ವಯಸ್ಸಿನ ಆರೋಪಿ ವಿಕ್ರಂ ಅತ್ವಾಲ್ ನನ್ನು ವಶಕ್ಕೆ ಪಡೆದಿದ್ದರು.
ಆರೋಪಿಯು ಕೆಲಸ ನಿರ್ವಹಿಸುತ್ತಿದ್ದ ಅಪಾರ್ಟ್ ಮೆಂಟ್ ನ ಶುಚಿತ್ವ ವಿಭಾಗದಲ್ಲೇ ಆತನ ಪತ್ನಿಯೂ ಕೆಲಸ ನಿರ್ವಹಿಸುತ್ತಿದ್ದು, ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302(ಹತ್ಯೆ)ರ ಅಡಿ ಪ್ರಕರಣ ದಾಖಲಿಸಿಕೊಂಡ 14 ಗಂಟೆಯ ನಂತರ ತನಿಖಾ ತಂಡವು ಅಂಧೇರಿಯಲ್ಲಿರುವ ತುಂಗಾ ಗ್ರಾಮದ ಅತ್ವಾಲ್ ನಿವಾಸವನ್ನು ತಲುಪಿದಾಗ, ಆರೋಪಿಯು ರಕ್ತದ ಕಲೆಗಳಿರುವ ಶರ್ಟ್ ತೊಟ್ಟಿರುವುದು, ಸಂತ್ರಸ್ತೆಯು ಸಾಯುವುದಕ್ಕೂ ಮುನ್ನ ಇಬ್ಬರ ನಡುವೆ ಘರ್ಷಣೆ ನಡೆದಿರುವುದನ್ನು ಸೂಚಿಸುವಂತೆ ಆತನ ಕೈಗಳು ಹಾಗೂ ಮುಖದ ಮೇಲೆ ಗಾಯದ ಕಲೆಗಳಿರುವುದನ್ನು ಕಂಡಿದೆ. ಆತನನ್ನು ವಿಚಾರಣೆಗೊಳಪಡಿಸಿದಾಗ, ಆಕೆಯ ಹತ್ಯೆಗೈದಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.