ವಾಯು ಮಾಲಿನ್ಯ: ದಿಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

Update: 2023-11-10 14:41 GMT

ಸುಪ್ರೀಂಕೋರ್ಟ್ | Photo: PTI

ಹೊಸದಿಲ್ಲಿ: ದಿಲ್ಲಿಯ ಏರುತ್ತಿರುವ ವಾಯು ಮಾಲಿನ್ಯವನ್ನು ನಿಭಾಯಿಸುವಲ್ಲಿ ಆಮ್ ಆದ್ಮಿ ಪಕ್ಷ (ಆಪ್) ಸರಕಾರವು ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ‘‘ಪ್ರತಿ ವರ್ಷವೂ ನಾವು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ ಬಳಿಕವಷ್ಟೇ ಸರಕಾರ ಚುರುಕಾಗಿ ಕೆಲಸ ಮಾಡುತ್ತದೆ’’ ಎಂದು ನ್ಯಾಯಾಲಯ ಹೇಳಿತು.

ದಿಲ್ಲಿ ಮತ್ತು ನೆರೆಯ ರಾಜ್ಯಗಳ ವಾಯುಮಾಲಿನ್ಯ ಹಾಗೂ ಬೆಳೆ ತ್ಯಾಜ್ಯವನ್ನು ಸುಡುವ ಪೃವೃತ್ತಿ ಬಗ್ಗೆ ಕಳವಳ ವ್ಯಕ್ತಪಡಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಎಲ್ಲಾ ರಾಜ್ಯಗಳು ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿತು.

‘‘ನಾವು ಜನರನ್ನು ಸಾಯಲು ಬಿಡಲು ಸಾಧ್ಯವಿಲ್ಲ. ಎಲ್ಲಾ ಮುಖ್ಯ ಕಾರ್ಯದರ್ಶಿಗಳು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅವರನ್ನು ಇಲ್ಲಿಗೆ ಕರೆಸಲಾಗುವುದು’’ ಎಂದು ನ್ಯಾಯಾಲಯ ಹೇಳಿತು.

ದಿಲ್ಲಿ ಸರಕಾರವು ಗುರುವಾರ ಸಲ್ಲಿಸಿದ ಅಫಿದಾವಿತ್‌ನಲ್ಲಿ, ವಾಹನಗಳ ಹೊಗೆಯನ್ನು ಕಡಿಮೆ ಮಾಡಲು ತಾನು ತಂದಿರುವ ಸರಿ-ಬೆಸ ಕಾರು ಯೋಜನೆಯಿಂದಾಗಿ ವಾಹನಗಳ ದಟ್ಟಣೆ ತಗ್ಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯವನ್ನು ತಗ್ಗಿಸಲು ಜಾರಿಗೊಳಿಸಲಾಗಿರುವ ಸರಿ-ಬೆಸ ಕಾರು ಯೋಜನೆಯು ‘‘ತೋರಿಕೆಗೆ ಮಾತ್ರ’’ ಎಂದು ಸುಪ್ರೀಂ ಕೋರ್ಟ್ ಬಣ್ಣಿಸಿದ ಎರಡು ದಿನಗಳ ಬಳಿಕ ದಿಲ್ಲಿ ಸರಕಾರ ಈ ಅಫಿದಾವಿತ್ ಸಲ್ಲಿಸಿದೆ.

‘‘ಸರಿ-ಬೆಸ ಕಾರು ಯೋಜನೆಯ ಪರಿಣಾಮ ಕನಿಷ್ಠವಾಗಿದೆ. ಅಂದರೆ ಸುಮಾರು 13 ಶೇಕಡದಷ್ಟು ಮಾಲಿನ್ಯ ಕಡಿಮೆಯಾಗಿರಬಹುದು’’ ಎಂದು ನ್ಯಾಯಾಲಯವು ಶುಕ್ರವಾರ ಹೇಳಿತು. ‘‘ಸಭೆಗಳು ನಡೆಯುತ್ತಿವೆ, ಆದರೆ ವಾಸ್ತವಿಕವಾಗಿ ಏನೂ ಆಗುತ್ತಿಲ್ಲ’’ ಎಂದು ಅದು ಅಭಿಪ್ರಾಯಪಟ್ಟಿತು.

ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ರಾಜ್ಯ ಸರಕಾರಗಳ ವಿವೇಚನೆಗೆ ಬಿಡುತ್ತಿರುವುದಾಗಿ ನ್ಯಾಯಾಲಯ ಹೇಳಿತು.

ಬೆಳೆ ತ್ಯಾಜ್ಯ ಸುಡುವ ಪ್ರವೃತ್ತಿಯು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ ನ್ಯಾಯಾಲಯವು, ಇದು ನಿಲ್ಲಬೇಕು ಎಂದು ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News