ಹೆಡ್ಗೆವಾರ್ ಸ್ಮಾರಕಕ್ಕೆ ಭೇಟಿಯಿಂದ ನುಣುಚಿಕೊಂಡ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್
ನಾಗ್ಪುರ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಶನಿವಾರ ಆರೆಸ್ಸೆಸ್ ಸಂಸ್ಥಾಪಕ ಕೆ.ಬಿ. ಹೆಡ್ಗೆವಾರ್ ಅವರ ಸ್ಮಾರಕ ಸ್ಮತಿ ಭವನಕ್ಕೆ ತೆರಳಿ ಪುಷ್ಪಾಂಜಲಿ ಸಲ್ಲಿಸಿದ್ದರೆ, ಉಪಮುಖ್ಯಮಂತ್ರಿ ಅಜಿತ ಪವಾರ್ ಅವರು ಸ್ಮಾರಕಕ್ಕೆ ಭೇಟಿ ನೀಡುವುದರಿಂದ ನುಣುಚಿಕೊಂಡಿದ್ದರು. ಇದಕ್ಕೂ ಮುನ್ನ ಸ್ಮತಿ ಭವನದ ಪಕ್ಕದಲ್ಲಿಯ ರೇಶಿಮಬಾಗ್ ಮೈದಾನದಲ್ಲಿ ಆಯೋಜಿಸಿದ್ದ ‘ಲಡ್ಕಿ ಬಹಿಣ’ ಕಾರ್ಯಕ್ರಮದಲ್ಲಿ ಈ ಮೂವರೂ ಒಟ್ಟಿಗೇ ಇದ್ದರು.
ಪವಾರ್ ಪಕ್ಷವು ಮಹಾಯುತಿ ಮೈತ್ರಿಕೂಟದಲ್ಲಿ ಜಾತ್ಯತೀತ ಎಂದು ಗುರುತಿಸಿಕೊಂಡಿರುವ ಏಕೈಕ ಮಿತ್ರಪಕ್ಷವಾಗಿರುವುದರಿಂದ ಅವರು ಹೆಡ್ಗೆವಾರ್ ಸ್ಮಾರಕಕ್ಕೆ ಭೇಟಿಯನ್ನು ತಪ್ಪಿಸಿಕೊಂಡಿದ್ದನ್ನು ಚುನಾವಣಾ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿರುವಾಗ ಸಂಭಾವ್ಯ ಮತಬ್ಯಾಂಕ್ ಅನ್ನು ಕೆಡಿಸಿಕೊಳ್ಳಲು ಪವಾರ್ ಬಯಸುತ್ತಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
"ಅಜಿತ್ ದಾದಾ ಅವರು ಕಾರ್ಯಕ್ರಮದ ಬಳಿಕ ಪೂರ್ವ ನಿಗದಿತ ಸಭೆಯೊಂದನ್ನು ಹೊಂದಿದ್ದರು. ಸದ್ಯಕ್ಕೆ ನಾವು ಅಷ್ಟನ್ನು ಮಾತ್ರ ಹೇಳಬಲ್ಲೆವು" ಎಂದು ಗುರುತಿಸಿಕೊಳ್ಳಲು ಬಯಸದ ನಾಗಪುರದ ಎನ್ಸಿಪಿ(ಅಜಿತ್) ರಾಜಕಾರಣಿಯೋರ್ವರು ತಿಳಿಸಿದರು.
ಪವಾರ್ ಹೆಡ್ಗೆವಾರ್ ಸ್ಮಾರಕಕ್ಕೆ ಭೇಟಿಯನ್ನು ತಪ್ಪಿಸಿಕೊಳ್ಳುವ ಮೂಲಕ ಮಹಾಯುತಿಯೊಳಗಿನ ದೋಷಗಳನ್ನು ಬಹಿರಂಗಗೊಳಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕರು ಹೇಳಿದ್ದಾರೆ.
ಮಹಾಯುತಿ ಮಿತ್ರಪಕ್ಷಗಳು ಕೇವಲ ಸ್ವಾರ್ಥಕ್ಕಾಗಿ ಒಟ್ಟಿಗೆ ಇದ್ದಾರೆ ಎನ್ನುವುದನ್ನು ಇದು ತೋರಿಸುತ್ತದೆ. ಅವರಲ್ಲಿ ಯಾವುದೇ ಸೈದ್ಧಾಂತಿಕ ಹೋಲಿಕೆಗಳಿಲ್ಲ ಮತ್ತು ಅಧಿಕಾರದಲ್ಲಿ ಉಳಿಯಲು ಅವರು ಪರಸ್ಪರ ಕೈ ಜೋಡಿಸುತ್ತಿದ್ದಾರೆ ಎಂದು ಎನ್ಸಿಪಿ (ಶರದ ಪವಾರ್) ನಾಗ್ಪುರ ಘಟಕದ ಅಧ್ಯಕ್ಷ ದುನೇಶ್ವರ ಪೇಠೆ ಹೇಳಿದರು.
ಅಜಿತ್ ಪವಾರ್ ಅವರನ್ನು ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಬಲ್ಲ ಮಹಾಯುತಿಯಲ್ಲಿನ ಏಕೈಕ ಮುಖವಾಗಿ ನೋಡಲಾಗುತ್ತಿದೆ. ಆದರೆ ಅವರು ಹೆಡ್ಗೆವಾರ್ ಸ್ಮಾರಕಕ್ಕೆ ಭೇಟಿಯನ್ನು ತಪ್ಪಿಸಿಕೊಂಡಿದ್ದು ಈಗಾಗಲೇ ಲೋಕಸಭಾ ಚುನಾವಣೆಗಳಲ್ಲಿ ಸೋಲಿಗಾಗಿ ಅವರನ್ನು ದೂಷಿಸಿರುವ ಆರೆಸ್ಸೆಸ್ ಮತ್ತು ಬಿಜೆಪಿ ಮತದಾರರನ್ನು ಇನ್ನಷ್ಟು ಕೆರಳಿಸಬಹುದು ಎಂದು ವರದಿಯಾಗಿದೆ.