ಮುಂಬೈನ ಜೈನ ಮಂದಿರ ನೆಲಸಮ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಖಂಡನೆ

Update: 2025-04-18 16:54 IST
Akhilesh Yadav

ಅಖಿಲೇಶ್ ಯಾದವ್ | PC : PTI 

  • whatsapp icon

ಲಕ್ನೊ: ಇತ್ತೀಚೆಗೆ ಮುಂಬೈನಲ್ಲಿ ಜೈನ ಮಂದಿರವೊಂದನ್ನು ನೆಲಸಮಗೊಳಿಸಿರುವ ನಡೆಯನ್ನು ಶುಕ್ರವಾರ ಖಂಡಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಜೆಪಿ ಸರಕಾರವು ದೇಶಾದ್ಯಂತ ಇರುವ ಶಾಂತಿಯುತ ಜೈನ ಸಮುದಾಯವನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

ಮುಂಬೈನಲ್ಲಿ ಜೈನ ಮಂದಿರವೊಂದನ್ನು ನೆಲಸಮಗೊಳಿಸಲಾಗಿದೆ ಎಂಬ ವರದಿಗಳ ಕುರಿತು ಅವರ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

ಜೈನ ಸಮುದಾಯವನ್ನುದ್ದೇಶಿಸಿ ಎಕ್ಸ್ ನಲ್ಲಿ ನೇರವಾಗಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, “ಈಗಿನ ಕಾಲಘಟ್ಟದಲ್ಲಿ ದೇಶದಲ್ಲಿ ಅಲ್ಪಸಂಖ್ಯಾತರಾಗಿರುವುದು ಶಾಪವಾಗಿ ಪರಿಣಮಿಸಿದೆ. ಸದ್ಯ ಜೈನ ಸಮುದಾಯದಲ್ಲಿ ಭಯ, ಅಸುರಕ್ಷಿತತೆ ಮನೆ ಮಾಡಿರುವುದು ತೀವ್ರ ಕಳವಳಕಾರಿಯಾಗಿದೆ ಹಾಗೂ ಈ ಸಂಗತಿ ಜಾಗತಿಕ ಗಮನ ಸೆಳೆದಿದ್ದು, ಖಂಡನೆಗೆ ಗುರಿಯಾಗಿದೆ” ಎಂದು ಹೇಳಿದ್ದಾರೆ.

ಜೈನ ಸಮುದಾಯದ ಮೇಲಿನ ದೌರ್ಜನ್ಯಗಳ ಸರಣಿ ಘಟನೆಗಳತ್ತ ಬೊಟ್ಟು ಮಾಡಿರುವ ಅವರು, ಇವು ಜೈನ ಸಮುದಾಯದ ವಿರುದ್ಧ ಹೆಚ್ಚುತ್ತಿರುವ ಆಕ್ರಮಣಕಾರಿ ಮನಸ್ಥಿತಿಯ ಭಾಗವಾಗಿವೆ ಎಂದು ಆರೋಪಿಸಿದ್ದಾರೆ.

ಮಧ್ಯಪ್ರದೇಶದ ಸಿಂಗೋಲಿಯಲ್ಲಿ ಜೈನ ಸನ್ಯಾಸಿಗಳ ಮೇಲೆ ನಡೆದಿದ್ದ ಹಿಂಸಾತ್ಮಕ ಹಲ್ಲೆ, ಬಿಜೆಪಿ ಸದಸ್ಯರೊಬ್ಬರು ಜೈನರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದ್ದ ಜಬಲ್ಪುರ್ ನಿಂದ ಸೋರಿಕೆಯಾಗಿದ್ದ ಆಡಿಯೊ ತುಣುಕು ಹಾಗೂ ಮುಂಬೈನ ಜೈನ ಮಂದಿರದಲ್ಲಿದ್ದ ಪವಿತ್ರ ವಿಗ್ರಹಗಳು, ಧರ್ಮ ಗ್ರಂಥಗಳು ಹಾಗೂ ಧಾರ್ಮಿಕ ಕೃತಿಗಳಿಗೆ ಅಗೌರವ ತೋರಿ, ಮಂದಿರವನ್ನು ನೆಲಸಮಗೊಳಿಸಿರುವ ಘಟನೆಗಳನ್ನು ಅವರು ತಮ್ಮ ಪೋಸ್ಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.

“ಎಲ್ಲೆಲ್ಲಿ ಬಿಜೆಪಿ ಸರಕಾರಗಳಿವೆಯೊ, ಅಲ್ಲೆಲ್ಲ ಹೀಗೇಕೆ ಜೈನರ ಮಂದಿರಗಳು, ಯಾತ್ರಾ ಸ್ಥಳಗಳು ಹಾಗೂ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆಯುತ್ತಿವೆ?” ಎಂದು ಪ್ರಶ್ನಿಸಿರುವ ಅಖಿಲೇಶ್ ಯಾದವ್, ಬಿಜೆಪಿ ಬೆಂಬಲಿತ ದುಷ್ಕರ್ಮಿಗಳು ಕೇವಲ ಜೈನರ ಧಾರ್ಮಿಕ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳ ಮೇಲೆ ಮಾತ್ರ ಕಣ್ಣು ಹಾಕಿಲ್ಲ, ಬದಲಿಗೆ ಅವರ ಖಾಸಗಿ ಆಸ್ತಿಪಾಸ್ತಿಗಳ ಮೇಲೂ ಕಣ್ಣು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News