ರಸ್ತೆ ದುರಂತಗಳಲ್ಲಿ ಕಳವಳಕಾರಿ ಹೆಚ್ಚಳ | ದೇಶದಲ್ಲಿ 5 ವರ್ಷಗಳಲ್ಲಿ 7.77 ಲಕ್ಷ ರಸ್ತೆ ಅವಘಡಗಳು
ಹೊಸದಿಲ್ಲಿ : ಕಳೆದ ಐದು ವರ್ಷಗಳಲ್ಲಿ ಉತ್ತರಪ್ರದೇಶ, ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳು ದೇಶದಲ್ಲೇ ಅತ್ಯಧಿಕ ಸಂಖ್ಯೆಯ ರಸ್ತೆ ಅವಘಡಗಳಿಗೆ ಸಾಕ್ಷಿಯಾಗಿವೆ. 2018ರಿಂದ 2022ರ ನಡುವಿನ ಅವಧಿಯಲ್ಲಿ ದೇಶಾದ್ಯಂತ 7.77 ಲಕ್ಷಕ್ಕೂ ಅಧಿಕ ರಸ್ತೆ ಅಪಘಾತಗಳು ಸಂಭವಿಸಿವೆಯೆಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಬಿಡುಗಡೆಗೊಳಿಸಿದ ವರದಿಯೊಂದು ತಿಳಿಸಿದೆ.
ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಲಭ್ಯವಾಗಿರುವ ದತ್ತಾಂಶಗಳ ಪ್ರಕಾರ 2018ರಿಂದ 2022ರ ನಡುವೆ ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಸಂಭವಿಸಿದ ಸಾವುನೋವುಗಳ ಸಂಖ್ಯೆಯು ಕಳವಳಕಾರಿ ಮಟ್ಟದಲ್ಲಿ ಏರಿಕೆಯಾಗಿದೆ. 2022ನೇ ಇಸವಿಯೊಂದರಲ್ಲೇ ದೇಶದಲ್ಲಿ ಸಂಭವಿಸಿದ ರಸ್ತೆ ಅವಘಡಗಳಲ್ಲಿ 1,68,491 ಸಾವುನೋವುಗಳು ಸಂಭವಿಸಿವೆ. 2021ರಲ್ಲಿ ರಸ್ತೆದುರಂತಗಳಲ್ಲಿ 1,53,972 ಸಾವು ನೋವುಗಳು ವರದಿಯಾಗಿದ್ದವು ಎಂದು ‘ಭಾರತದಲ್ಲಿ ರಸ್ತೆ ಅವಘಡಗಳು, 2022’ ವರದಿ ತಿಳಿಸಿದೆ.
2022ನೇ ಇಸವಿಯೊಂದರಲ್ಲಿಯೇ ಉತ್ತರಪ್ರದೇಶದಲ್ಲಿ ಗರಿಷ್ಠ ರಸ್ತೆ ಅವಘಡಗಳು ವರದಿಯಾಗಿದ್ದು, 22,595 ಮಂದಿ ಸಾವನ್ನಪ್ಪಿದ್ದರು. ಮಹಾರಾಷ್ಟ್ರ ಆನಂತರದ ಸ್ಥಾನದಲ್ಲಿದ್ದು, ಆ ರಾಜ್ಯವು 15,224 ಸಾವುಗಳನ್ನು ಕಂಡಿತ್ತು. ಅದೇ ವರ್ಷ ತಮಿಳುನಾಡಿನಲ್ಲಿ 17,884 ರಸ್ತೆ ಅವಘಡದ ಸಾವುಗಳು ವರದಿಯಾಗಿದ್ದವು. ಕರ್ನಾಟಕ ಐದನೇ ಸ್ಥಾನದಲ್ಲಿದ್ದು, 53,448 ಸಾವುಗಳು ಸಂಭವಿಸಿದ್ದವು.ಭಾರತದ ರಸ್ತೆ ಅವಘಡಗಳಲ್ಲಿನ ಒಟ್ಟು ಸಾವುನೋವುಗಳ ಗಣನೀಯ ಭಾಗವು ಈ ಮೂರು ರಾಜ್ಯಗಳಲ್ಲಿ ಸಂಭವಿಸಿವೆ. ಅತಿವೇಗದ ವಾಹನಚಾಲನೆ, ಡ್ರೈವಿಂಗ್ ವೇಳೆ ಮೊಬೈಲ್ ಫೋನ್ ಬಳಕೆ, ಮದ್ಯಸೇವಿಸಿ ವಾಹನ ಚಾಲನೆ ಹಾಗೂ ಚಾಲಕನ ಅಶಿಸ್ತು ಅವಘಡಗಳಿಗೆ ಪ್ರಮುಖ ಕಾರಣಗಳಾಗಿದ್ದವು ಎಂದು ವರದಿ ತಿಳಿಸಿದೆ.
ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ರಸ್ತೆ ಸುರಕ್ಷತೆಗೆ ಸಂಬಂಧಿಸಿ ಶಿಕ್ಷಣ, ಎಂಜಿನಿಯರಿಂಗ್, ಅನುಷ್ಠಾನ ಹಾಗೂ ತುರ್ತು ಪಾಲನೆ ಸೇರಿದಂತೆ ಹಲವಾರು ಕ್ರಮಗಳನ್ನು ಜಾರಿಗೊಳಿಸಿದೆ. 2019ರ ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆಯಡಿ ಕಠಿಣವಾದ ದಂಡಗಳನ್ನು ವಿಧಿಸುವುದು, ಸಂಚಾರ ಉಲ್ಲಂಘನೆಗಳಿಗೆ ಕಡಿವಾಣ ಹಾಕಲು ಇ-ಚಲನ್‌ಗಳಂತಹ ತಂತ್ರಜ್ಞಾನದ ಬಳಕೆ ಇತ್ಯಾದಿ ಉಪಕ್ರಮಗಳನ್ನು ಕೈಗೊಂಡಿದೆ. 2020ರಿಂದೀಚೆಗೆ 36,700 ಕೋಟಿ ರೂ.ಗೂ ಅಧಿಕ ಮೊತ್ತದ 23 ಕೋಟಿ ಇ-ಚಲನ್‌ಗಳನ್ನು ನೀಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಸುರಕ್ಷತಾ ಪರಿಶೋಧನೆಯನ್ನು ಸರಕಾರವು ಕಡ್ಡಾಯಗೊಳಿಸಿದೆ. ರಸ್ತೆಸುರಕ್ಷತೆಗೆ ಸಂಬಂಧಿಸಿ ಜಾಗೃತಿ ಮೂಡಿಸುವುದು ಹಾಗೂ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅದು ಶ್ರಮಿಸುತ್ತಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಮಾದರಿ ವಾಹನ ಚಾಲನಾ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಿದೆ.
►ರಸ್ತೆ ಅವಘಡದಲ್ಲಿ ಗರಿಷ್ಠ ಸಾವುಗಳನ್ನು 10 ರಾಜ್ಯಗಳು (2018-2022)
ಉತ್ತರಪ್ರದೇಶ-1,08,882, ತಮಿಳುನಾಡು-84,316,ಮಹಾರಾಷ್ಟ್ರ-66,370, ಮಧ್ಯಪ್ರದೇಶ-58,580, ಕರ್ನಾಟಕ- 53,448, ರಾಜಸ್ಥಾನ-51,280, ಆಂಧ್ರಪ್ರದೇಶ-39,058, ಗುಜರಾತ್-36,626, ಬಿಹಾರ-36,191, ತೆಲಂಗಾಣ-35,565,