ರಾಜೀವ್ ಚಂದ್ರಶೇಖರ್ ವಿರುದ್ಧ ಮತಕ್ಕೆ ಹಣ ಆರೋಪ | ಶಶಿ ತರೂರ್ ಗೆ ಕಠಿಣ ಎಚ್ಚರಿಕೆ ನೀಡಿದ ಚುನಾವಣಾ ಆಯೋಗ

Update: 2024-04-16 15:44 GMT

ರಾಜೀವ್ ಚಂದ್ರಶೇಖರ್ , ಶಶಿ ತರೂರ್ | PC :ANI 

ತಿರುವನಂತಪುರ : ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ದೃಢೀಕರಿಸದ ಆರೋಪ ಮಾಡಿರುವುದಕ್ಕಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಚುನಾವಣಾ ಆಯೋಗ ರವಿವಾರ ಕಠಿಣ ಎಚ್ಚರಿಕೆ ನೀಡಿದೆ.

ಎಪ್ರಿಲ್ 26ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕೇರಳದ ತಿರುವನಂತಪುರದಲ್ಲಿ ಚಂದ್ರಶೇಖರ್ ಅವರ ವಿರುದ್ಧ ಶಶಿ ತರೂರ್ ಸ್ಪರ್ಧಿಸಲಿದ್ದಾರೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ಶಶಿ ತರೂರ್ ಅವರು, ರಾಜೀವ್ ಚಂದ್ರಶೇಖರ್ ಮತಕ್ಕೆ ಬದಲಾಗಿ ಮತದಾರರಿಗೆ ಹಾಗೂ ಧಾರ್ಮಿಕ ನಾಯಕರಿಗೆ ಹಣ ನೀಡಿದ್ದಾರೆ ಎಂದು ಹೇಳಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಶಿ ತರೂರ್ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಆದರೆ, ತರೂರ್ ಅವರು ಈ ಆರೋಪವನ್ನು ನಿರಾಕರಿಸಿದ್ದರು. ನಾನು ಸಂದರ್ಶನದಲ್ಲಿ ಚಂದ್ರಶೇಖರ್ ಅಥವಾ ಬಿಜೆಪಿಯ ಹೆಸರು ಹೇಳಿಲ್ಲ ಎಂದು ಅವರು ಪ್ರತಿಪಾದಿಸಿದ್ದರು.

ಆದರೆ ಮಾದರಿ ನೀತಿ ಸಂಹಿತೆಗೆ ಜಿಲ್ಲಾ ನೋಡಲ್ ಅಧಿಕಾರಿ ಕೂಡ ಆಗಿರುವ ತಿರುವನಂತಪುರದ ಉಪ ಜಿಲ್ಲಾಧಿಕಾರಿ ಅಶ್ವಥಿ ಶ್ರೀನಿವಾಸ್ ಅವರು ತರೂರ್ ಅವರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಇನ್ನು ಮುಂದೆ ದೃಢೀಕರಿಸದ ಆರೋಪಗಳನ್ನು ಮಾಡಬಾರದು ಎಂದು ಸೂಚಿಸಿದ್ದಾರೆ.

ಸಂದರ್ಶನದ ಹಿನ್ನೆಲೆಯಲ್ಲಿ ಆರೋಪಗಳನ್ನು ಓದಿದಾಗ ಅದು ರಾಜೀವ್ ಚಂದ್ರಶೇಖರ್ ಅವರತ್ತ ಬೆಟ್ಟು ಮಾಡಿದೆ. ಆದುದರಿಂದ ಶಶಿ ತರೂರ್ ಅವರ ವಾದ ಸ್ವೀಕಾರಾರ್ಹವಲ್ಲ ಎಂದು ಅಧಿಕಾರಿ ಕಂಡುಕೊಂಡಿದ್ದಾರೆ. ತನ್ನ ಅನಗತ್ಯ ಹೇಳಿಕೆಗೆ ತರೂರ್ ಅವರು ಯಾವುದೇ ಪುರಾವೆಗಳನ್ನು ನೀಡಿಲ್ಲ ಎಂದು ಕೂಡ ಆದೇಶ ಹೇಳಿದೆ.

ಈ ಆದೇಶಕ್ಕೆ ಪ್ರತಿಕ್ರಿಯಿಸಿರುವ ಚಂದ್ರಶೇಖರ್, ಇದು ನನ್ನ ಎದುರಾಳಿಯು ನನ್ನ ವಿರುದ್ಧ ಮಾಡುತ್ತಿರುವ ಅಪಪ್ರಚಾರಕ್ಕೆ ಸೂಕ್ತ ಉತ್ತರವಾಗಿದೆ ಎಂದಿದ್ದಾರೆ. ಕಾಂಗ್ರೆಸ್ ಹಾಗೂ ಎಲ್ಡಿಎಫ್ ತಿರುವನಂತಪುರದಲ್ಲಿ ಅಭಿವೃದ್ಧಿ ಹಾಗೂ ಪ್ರಗತಿಗೆ ಸಂಬಂಧಿಸಿದ ವಿಷಯಗಳಿಂದ ಜನರ ಮನಸ್ಸನ್ನು ದೂರ ಸೆಳೆಯುತ್ತಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News