ಚುನಾವಣಾ ಪ್ರಚಾರದಲ್ಲಿ ಅಪ್ರಾಪ್ತ ವಯಸ್ಕರನ್ನು ಬಳಸಿಕೊಂಡ ಆರೋಪ: ಅಮಿತ್ ಶಾ ಮತ್ತು ಇತರರ ವಿರುದ್ಧ ಪ್ರಕರಣ ದಾಖಲು
ಹೈದರಾಬಾದ್: ಇಲ್ಲಿ ಇತ್ತೀಚಿಗೆ ಚುನಾವಣಾ ಪ್ರಚಾರದಲ್ಲಿ ಅಪ್ರಾಪ್ತ ವಯಸ್ಕರನ್ನು ಬಳಸಿಕೊಂಡಿದ್ದ ಆರೋಪದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ,ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಮಾಧವಿ ಲತಾ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ ನಗರದ ಪೋಲಿಸರು ಪ್ರಕರಣವನ್ನು ದಾಖಲಿಸಿದ್ದಾರೆ.
ಮೇ 1ರಂದು ಲಾಲ್ ದರ್ವಾಜಾದಿಂದ ಸುಧಾ ಟಾಕೀಸ್ ವರೆಗೆ ನಡೆದಿದ್ದ ಬಿಜೆಪಿ ರ್ಯಾಲಿಯಲ್ಲಿ ವೇದಿಕೆಯಲ್ಲಿ ಶಾ ಅವರೊಂದಿಗೆ ಕೆಲವು ಅಪ್ರಾಪ್ತ ವಯಸ್ಕ ಮಕ್ಕಳಿದ್ದರು ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ನಿರಂಜನ ರೆಡ್ಡಿಯವರು ರಾಜ್ಯದ ಮುಖ್ಯಚುನಾವಣಾಧಿಕಾರಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಮಗುವೊಂದು ಬಿಜೆಪಿಯ ಚಿಹ್ನೆಯನ್ನು ಹಿಡಿದುಕೊಂಡಿತ್ತು. ಇದು ಚುನಾವಣಾ ಆಯೋಗದ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದೂ ರೆಡ್ಡಿ ಆರೋಪಿಸಿದ್ದಾರೆ.
ದೂರಿನ ಬಳಿಕ ಮುಖ್ಯಚುನಾವಣಾಧಿಕಾರಿಗಳು ವಾಸ್ತವಿಕ ವರದಿಯನ್ನು ಕೋರಿ ನಗರ ಪೋಲಿಸರಿಗೆ ಅದನ್ನು ರವಾನಿಸಿದ್ದು,ಇದರ ಪರಿಣಾಮವಾಗಿ ಗುರುವಾರ ಸಂಜೆ ಮೊಘಲ್ಪುರ ಪೋಲಿಸ್ ಠಾಣೆಯಲ್ಲಿ ಶಾ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಿಜೆಪಿ ನಾಯಕರಾದ ಟಿ.ಯಮನ್ ಸಿಂಗ್,ಜಿ.ಕಿಶನ ರೆಡ್ಡಿ ಮತ್ತು ಶಾಸಕ ಟಿ.ರಾಜಾ ಸಿಂಗ್ ಅವರು ಪ್ರಕರಣದಲ್ಲಿಯ ಇತರ ಆರೋಪಿಗಳಲ್ಲಿ ಸೇರಿದ್ದಾರೆ.