ದಿಲ್ಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಜೊತೆ ಮೈತ್ರಿಯಿಲ್ಲ: ಆಪ್‌

Update: 2024-06-07 10:16 GMT

ಗೋಪಾಲ್‌ ರಾಯ್ (PTI)

ಹೊಸದಿಲ್ಲಿ: ಕಾಂಗ್ರೆಸ್‌ ಜೊತೆಗಿನ ತಮ್ಮ ಪಕ್ಷದ ಮೈತ್ರಿ ಲೋಕಸಭಾ ಚುನಾವಣೆಗೆ ಮಾತ್ರ ಆಗಿದೆ ಎಂದು ಆಮ್‌ ಆದ್ಮಿ ಪಕ್ಷದ ದಿಲ್ಲಿ ಸಂಚಾಲಕ ಗೋಪಾಲ್‌ ರಾಯ್ ಹೇಳಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದೊಂದಿಗೆ ಸೀಟು ಹಂಚಿಕೆ ಏರ್ಪಾಟಿನ ಸಾಧ್ಯತೆಯನ್ನೂ ಅವರು ಅಲ್ಲಗಳೆದಿದ್ದಾರೆ.

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ನಿವಾಸದಲ್ಲಿ ಪಕ್ಷದ ಶಾಸಕರು ಹಾಗೂ ಹಿರಿಯ ನಾಯಕರ ಸಭೆ ನಡೆಸಿ ಮಾತನಾಡಿದ ಅವರು ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿ ಮೈತ್ರಿಕೂಟ ರಚಿಸಲಾಗಿತ್ತು ಎಂದು ಹೇಳಿದ್ದಾರೆ.

“ಲೋಕಸಭಾ ಚುನಾವಣೆಯನ್ನು ನಾವು ಜೊತೆಯಾಗಿ ಪ್ರಾಮಾಣಿಕವಾಗಿ ಎದುರಿಸಿದೆವು. ದಿಲ್ಲಿ ವಿಧಾನಸಭಾ ಚುನಾವಣೆಗೆ ಮೈತ್ರಿಯಿಲ್ಲ. ಈ ಹೋರಾಟವನ್ನು ನಾವು ದಿಲ್ಲಿಯ ಜನತೆಯ ಜೊತೆ ಹೋರಾಡಿ ಗೆಲ್ಲುತ್ತೇವೆ,” ಎಂದು ಅವರು ಹೇಳಿದರು.

2013ರಲ್ಲಿ ದಿಲ್ಲಿಯಲ್ಲಿ ಆಮ್‌ ಆದ್ಮಿ ಪಕ್ಷದ ಮೊದಲ ಸರ್ಕಾರ ರಚನೆಯಾದಾಗ ಕಾಂಗ್ರೆಸ್‌ ಅದಕ್ಕೆ ಬಾಹ್ಯ ಬೆಂಬಲ ನೀಡಿತ್ತು. ಈ ಸರ್ಕಾರ ಕೇವಲ 49 ದಿನ ಆಡಳಿತ ನಡೆಸಿತ್ತು.

ಲೋಕಸಭಾ ಚುನಾವಣೆಗೆ ಮೊದಲ ಬಾರಿ ಎರಡೂ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ನಡೆಸಿದ್ದವು. ಆಪ್‌ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ ಕಾಂಗ್ರೆಸ್‌ ಮೂರರಲ್ಲಿ ಸ್ಪರ್ಧಿಸಿತ್ತು. ಆದರೆ ಮೈತ್ರಿಕೂಟ ಒಂದೇ ಒಂದು ಸ್ಥಾನ ಗಳಿಸಿಲ್ಲ ಹಾಗೂ ದಿಲ್ಲಿಯ ಎಲ್ಲಾ ಏಳು ಸ್ಥಾನಗಳಲ್ಲಿ ಬಿಜೆಪಿ ಜಯ ಗಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News