ಆ್ಯಂಬುಲೆನ್ಸ್ ಅಲಭ್ಯತೆ; ಹೆದ್ದಾರಿ ಬದಿ ಅವಳಿ ಶಿಶುಗಳಿಗೆ ಜನ್ಮ ನೀಡಿದ ಮಹಿಳೆ
ಬಲಂಗೀರ್: ಆ್ಯಂಬುಲೆನ್ಸ್ ಲಭ್ಯವಾಗದ ಕಾರಣ ಮಹಿಳೆಯೊಬ್ಬರು ಹೆದ್ದಾರಿ ಬದಿಯಲ್ಲಿ ಅವಳಿ ಶಿಶುಗಳಿಗೆ ಜನ್ಮ ನೀಡಿದ ಘಟನೆ ಒಡಿಶಾದ ಬಲಂಗೀರ್ ಜಿಲ್ಲೆಯ ಕುಮುದಾ ಗ್ರಾಮದಲ್ಲಿ ನಡೆದಿದೆ.
ಕುಮುದಾ ಗ್ರಾಮದ ಮಹಿಳೆ ಬಿಂದಿಯಾಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಕುಟುಂಬ ಆ್ಯಂಬುಲೆನ್ಸ್‌ಗೆ ಕರೆ ಮಾಡಿತು. ಆದರೆ, ಅವರ ಮನವಿಯನ್ನು ನಿರ್ಲಕ್ಷಿಸಲಾಗಿತ್ತು. ಅನಂತರ ಕುಟುಂಬ ಬಿಂದಿಯಾರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಟೊ ರಿಕ್ಷಾವೊಂದನ್ನು ಬಾಡಿಗೆಗೆ ಗೊತ್ತುಮಾಡಿತ್ತು.
ಆಟೊ ರಿಕ್ಷಾದಲ್ಲಿ ತೆರಳುತ್ತಿರುವ ಸಂದರ್ಭ ಬಿಂದಿಯಾಗೆ ಹೆರಿಗೆ ನೋವು ತೀವ್ರವಾಯಿತು. ಈ ಹಿನ್ನೆಲೆಯಲ್ಲಿ ಕುಟುಂಬ ಹೆದ್ದಾರಿ ಬದಿ ತಾತ್ಕಾಲಿಕ ಟೆಂಟ್ ನಿರ್ಮಿಸಿತು. ಬಿಂದಿಯಾ ಅಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಂದಿಯಾ, ‘‘ನಾನು ಆ್ಯಂಬುಲೆನ್ಸ್‌ಗೆ ಕರೆ ಮಾಡಿದೆ. ಆದರೆ, ಯಾರೊಬ್ಬರೂ ಬರಲಿಲ್ಲ. ಆಶಾ ಕಾರ್ಯಕರ್ತೆಯರಿಗೆ ಕೂಡ ಕರೆ ಮಾಡಿದೆವು. ಆದರೆ, ಅವರು ಕೂಡ ನಮ್ಮೊಂದಿಗೆ ಬರಲಿಲ್ಲ’’ ಎಂದಿದ್ದಾರೆ.
ಈಗ ಬಿಂದಿಯಾ ಹಾಗೂ ಅವರ ಇಬ್ಬರು ಅವಳಿ ಶಿಶುಗಳು ಆರೋಗ್ಯವಂತವಾಗಿವೆ. ಆದರೆ, ಘಟನೆಗೆ ಸಂಬಂಧಿಸಿ ಆಡಳಿತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.