ಆಂಧ್ರಪ್ರದೇಶ | ಫ್ಲೆಕ್ಸ್ ಅಳವಡಿಸುವಾಗ ವಿದ್ಯುತ್ ಆಘಾತ; ನಾಲ್ವರು ಮೃತ್ಯು
ಅಮರಾವತಿ: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ವಿದ್ಯುದಾಘಾತದಿಂದ ನಾಲ್ವರು ಮೃತಪಟ್ಟಿದ್ದು, ಓರ್ವ ಗಾಯಗೊಂಡಿದ್ದಾನೆ.
ರವಿವಾರ ಉಂಡರಾಜವರಂ ಮಂಡಳ ವ್ಯಾಪ್ತಿಯ ತಡಿಪರು ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ಸರ್ವಾಯ್ ಪಾಪಣ್ಣ ಗೌಡ್ ಅವರ ಪ್ರತಿಮೆಯ ಉದ್ಘಾಟನಾ ಸಿದ್ಧತೆಗಳು ನಡೆಯುತ್ತಿದ್ದಾಗ ಈ ದುರಂತ ಘಟನೆ ಸಂಭವಿಸಿದೆ. ನಟ ಸುಮನ್ ಅವರು ಸೋಮವಾರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದರು.
ಫ್ಲೆಕ್ಸ್ ಅನ್ನು ಅಳವಡಿಸುತ್ತಿದ್ದಾಗ ಕಾರ್ಮಿಕರು ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯ ಸಂಪರ್ಕಕ್ಕೆ ಬಂದಿದ್ದರು. ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು,ಗಂಭೀರವಾಗಿ ಗಾಯಗೊಂಡಿರುವ ಇನ್ನೋರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೋಲಿಸರು ತಿಳಿಸಿದರು.
ಮೃತರನ್ನು ಬೊಲ್ಲ ವೀರರಾಜು,ಪಾಮರ್ತಿ ನಾಗೇಂದ್ರ,ಮರಿಸೆಟ್ಟಿ ಮಣಿಕಂಠ ಮತ್ತು ಕಸಗಾನಿ ಕೃಷ್ಣ ಎಂದು ಗುರುತಿಸಲಾಗಿದೆ. ಗಾಯಾಳು ಅನಂತರಾವ್ ತನುಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪಾಪಣ್ಣ ಗೌಡ್ ಪ್ರತಿಮೆ ಸ್ಥಾಪನೆ ಕುರಿತು ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಎರಡು ಗುಂಪುಗಳ ನಡುವೆ ವಿವಾದ ತಲೆದೋರಿತ್ತು. ಇತ್ತೀಚಿಗೆ ಸ್ಥಳೀಯ ಅಧಿಕಾರಿಯೋರ್ವರು ಎರಡೂ ಗುಂಪುಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡಿದ್ದರು.
ಘಟನೆಯ ಕುರಿತು ದುಃಖವನ್ನು ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಪರಿಹಾರವನ್ನು ಪ್ರಕಟಿಸಿದ್ದಾರೆ. ಗಾಯಾಳುವಿಗೆ ಸಾಧ್ಯವಿರುವ ಅತ್ಯುತ್ತಮ ಚಿಕಿತ್ಸೆಯನ್ನು ಒದಗಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.