ಶಾಲಾ ಬಸ್ ಚಲಾಯಿಸುತ್ತಿದ್ದಾಗ ಹೃದಯ ಸ್ತಂಭನ: ಸಾಯುವ ಮುನ್ನ 40ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ರಕ್ಷಿಸಿದ ಚಾಲಕ
ಬಾಪತ್ಲಾ (ಆಂಧ್ರಪ್ರದೇಶ): ಶಾಲಾ ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ದಿಢೀರ್ ಹೃದಯ ಸ್ತಂಭನವಾಗಿದ್ದು, ಆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 40ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬುಧವಾರದಂದು ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ನಡೆದಿದೆ ಎಂದು thenewsminute.com ವರದಿ ಮಾಡಿದೆ.
ಅದ್ದಾಂಕಿ ಪಟ್ಟಣದ ಮೈಲಾವರಂ, ಉಪ್ಪಲಪಡು ಹಾಗೂ ವೆಂಪಾರಾ ಗ್ರಾಮಗಳ ಮಾರ್ಗವಾಗಿ ಖಾಸಗಿ ಶಾಲೆಯ ಬಸ್ ಒಂದನ್ನು 53 ವರ್ಷದ ಗುರ್ರಲಾ ಏಡುಕೊಂಡಲು ಎಂಬ ಚಾಲಕ ಚಲಾಯಿಸುವಾಗ ಘಟನೆ ಸಂಭವಿಸಿದೆ.
ಪೊಲೀಸರ ಪ್ರಕಾರ, ಬಸ್ ಚಾಲಕ ಉಪ್ಪಲಪಡುವಿನಿಂದ ಬಸ್ ಚಲಾಯಿಸತೊಡಗಿದ ನಂತರ ಹೃದಯ ಸ್ತಂಭನಕ್ಕೀಡಾಗಿದ್ದಾರೆ. ಆದರೆ, ಆತ ತಾನು ಮೃತಪಡುವುದಕ್ಕೂ ಮುನ್ನ ಕೆಲವೇ ಕ್ಷಣಗಳಲ್ಲಿ ಬಸ್ ಅನ್ನು ನಿಲ್ಲಿಸುವ ಮೂಲಕ ದೊಡ್ಡ ದುರಂತವೊಂದನ್ನು ತಪ್ಪಿಸಿದ್ದಾರೆ ಎಂದು ಹೇಳಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆಯೆ, ಸ್ಥಳೀಯರು ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರಾದರೂ, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಅದೇ ಬಸ್ ಅನ್ನು ಮತ್ತೊಬ್ಬ ಚಾಲಕ ಚಲಾಯಿಸಿಕೊಂಡು ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ದಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.