ದಲಿತ ಕಾಂಗ್ರೆಸ್ ನಾಯಕ ಭೇಟಿ ನೀಡಿದ್ದಕ್ಕೆ ದೇವಾಲಯ ಶುದ್ಧೀಕರಣ ಪ್ರಕರಣ: ಬಿಜೆಪಿಯದ್ದು ದಲಿತ ವಿರೋಧಿ ಮನಸ್ಥಿತಿ ಎಂದ ರಾಹುಲ್ ಗಾಂಧಿ

Update: 2025-04-09 15:45 IST
Rahul Gandhi

ರಾಹುಲ್ ಗಾಂಧಿ | PC : PTI 

  • whatsapp icon

ಅಹಮದಾಬಾದ್: ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿನ ರಾಮ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ದಲಿತ ಕಾಂಗ್ರೆಸ್ ನಾಯಕ ಟೀಕಾರಾಮ್ ಜುಲ್ಲಿ ಭಾಗವಹಿಸಿದ ನಂತರ, ಬಿಜೆಪಿ ನಾಯಕರೊಬ್ಬರು ಆ ಮಂದಿರವನ್ನು ಗಂಗಾಜಲದಲ್ಲಿ ಶುದ್ಧೀಕರಿಸಿದ್ದ ಘಟನೆಗೆ ಸಂಬಂಧಿಸಿದಂತೆ ಬುಧವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಬಿಜೆಪಿಯದ್ದು ದಲಿತ ವಿರೋಧಿ ಮನಸ್ಥಿತಿ” ಎಂದು ಹರಿಹಾಯ್ದಿದ್ದಾರೆ.

ದೇಶವು ಸಂವಿಧಾನ ಹಾಗೂ ಅದರ ಸಿದ್ಧಾಂತಗಳ ಆಧಾರದಲ್ಲಿ ನಡೆಯಲಿದೆಯೆ ಹೊರತು ಬಹುಜನರನ್ನು ಎರಡನೆ ದರ್ಜೆಯ ಪ್ರಜೆಗಳಂತೆ ಪರಿಗಣಿಸುವ ಮನುಸ್ಮೃತಿಯನ್ನು ಆಧರಿಸಿಯಲ್ಲ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಬಿಜೆಪಿಯ ದಲಿತ ವಿರೋಧಿ ಮನಸ್ಥಿತಿ ಹಾಗೂ ಮನುಸ್ಮೃತಿ ಚಿಂತನೆಗೆ ಮತ್ತೊಂದು ನಿದರ್ಶನ! ಬಿಜೆಪಿಯು ನಿರಂತರವಾಗಿ ದಲಿತರನ್ನು ಅವಮಾನಿಸುತ್ತಾ, ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ” ಎಂದು ಆರೋಪಿಸಿದ್ದಾರೆ.

“ಹೀಗಾಗಿಯೇ ಸಂವಿಧಾನವನ್ನು ಗೌರವಿಸುವುದು ಮಾತ್ರವಲ್ಲ; ರಕ್ಷಿಸುವುದೂ ಮುಖ್ಯವಾಗಿದೆ. ಮೋದಿಯವರೆ, ದೇಶವು ಸಂವಿಧಾನ ಹಾಗೂ ಅದರ ಸಿದ್ಧಾಂತಗಳ ಮೇಲೆ ನಡೆಯಲಿದೆಯೆ ಹೊರತು, ಬಹುಜನರನ್ನು ಎರಡನೆ ದರ್ಜೆಯ ಪ್ರಜೆಗಳನ್ನಾಗಿ ಪರಿಗಣಿಸುವ ಮನುಸ್ಮೃತಿಯನ್ನು ಆಧರಿಸಿಯಲ್ಲ” ಎಂದು ಅವರು ಟೀಕಾಪ್ರಹಾರ ನಡೆಸಿದ್ದಾರೆ.

ಇದಕ್ಕೂ ಮುನ್ನ, ಮಂಗಳವಾರದಂದು ಬಿಜೆಪಿ ದಲಿತ ವಿರೋಧಿಯಾಗಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್, ರಾಜಸ್ಥಾನ ವಿಧಾನಸಭೆಯ ವಿಪಕ್ಷ ನಾಯಕ ಟೀಕಾರಾಮ್ ಜುಲ್ಲಿ ಅವರು ಅಲ್ವಾರ್ ನಲ್ಲಿರುವ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ, ಮಂದಿರದಲ್ಲಿ ಗಂಗಾ ಜಲ ಪ್ರೋಕ್ಷಿಸಿದ್ದ ಬಿಜೆಪಿ ನಾಯಕ ಜ್ಞಾನ್ ದೇವ್ ಅಹುಜಾರ ನಡವಳಿಕೆಯ ಕುರಿತು ಬಿಜೆಪಿಯ ಉನ್ನತ ನಾಯಕತ್ವವು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿತ್ತು.

ಜ್ಞಾನ್ ದೇವ್ ಅಹುಜಾರ ಕೃತ್ಯವು ದಲಿತರಿಗೆ ಮಾಡಿದ ಅವಮಾನವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಖಂಡಿಸಿದ್ದರು. ಆದರೆ, ಈ ಆರೋಪವನ್ನು ಜ್ಞಾನ್ ದೇವ್ ಅಹುಜಾ ನಿರಾಕರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News