ವಯನಾಡ್ ನಲ್ಲಿ ಮುಂದುವರೆದ ರಕ್ಷಣಾ ಕಾರ್ಯಾಚರಣೆ: ಕೇವಲ 31 ಗಂಟೆಗಳಲ್ಲಿ 190 ಅಡಿ ಉದ್ದದ ಸೇತುವೆ ನಿರ್ಮಿಸಿದ ಸೇನೆ

Update: 2024-08-02 07:17 GMT

Photo credit: indiatoday.in

ವಯನಾಡ್: ಭಾರತೀಯ ಸೇನೆ, ಎನ್‍ಡಿಆರ್‌ಎಫ್ ಸೇರಿದಂತೆ ಸ್ಥಳೀಯ ರಕ್ಷಣಾ ತಂಡಗಳು ಸಾವಿರಾರು ಸ್ವಯಂ ಸೇವಕರು ಕೇರಳದ ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಗುಡ್ಡಗಾಡು ಜಿಲ್ಲೆಯಲ್ಲಿ ಭಾರಿ ಭೂಕುಸಿತ ಸಂಭವಿಸಿದ ಮೂರು ದಿನಗಳ ನಂತರವೂ ಕುಸಿದ ಕಟ್ಟಡಗಳಲ್ಲಿ ಬದುಕುಳಿದವರಿಗಾಗಿ ಹುಡುಕಾಟ ಮುಂದುವರೆಸಿವೆ. ಮಂಗಳವಾರ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಇಲ್ಲಿಯವರೆಗೆ ಕನಿಷ್ಠ 291 ಜನರು ಸಾವನ್ನಪ್ಪಿದ್ದು, ಮತ್ತು 206 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಹಾಳಾದ ರಸ್ತೆಗಳು ಮತ್ತು ಸೇತುವೆಗಳ ಕಾರಣದಿಂದಾಗಿ ಕುಸಿಯುತ್ತಿರುವ ಭೂಮಿ, ಮತ್ತು ದೊಡ್ಡ ಸಲಕರಣೆಗಳ ಕೊರತೆ ಸೇರಿದಂತೆ ಹಲವಾರು ಸವಾಲುಗಳಿಂದ ರಕ್ಷಣಾ ಪ್ರಯತ್ನಗಳಿಗೆ ಅಡ್ಡಿಯಾಗಿದೆ. ಮನೆಗಳು ಮತ್ತು ಇತರ ಕಟ್ಟಡಗಳ ಮೇಲೆ ಬಿದ್ದ ಮಣ್ಣು ಮತ್ತು ಬೃಹತ್ ಮರಗಳನ್ನು ತೆರವುಗೊಳಿಸಲು ರಕ್ಷಣಾ ತಂಡಗಳಿಗೆ ಕಷ್ಟಕರವಾಗಿದೆ. ಈ ನಡುವೆ ಭಾರತೀಯ ಸೇನೆಯು 191 ಅಡಿ ಉದ್ದದ ತಾತ್ಕಾಲಿಕ ಸೇತುವೆಯ ನಿರ್ಮಾಣವನ್ನು ದಾಖಲೆ ಸಮಯದಲ್ಲಿ ಪೂರ್ಣಗೊಳಿಸಿದೆ.

ಸೇತುವೆಯ ಸಾಮಥ್ರ್ಯವನ್ನು ದೃಢಪಡಿಸಲು ಸೇನೆ ಮೊಟ್ಟಮೊದಲಿಗೆ ಟ್ರಕ್ಕನ್ನು ಓಡಿಸಿದೆ. 3 ಮೀಟರ್ ಅಗಲದ ಸೇತುವೆ 24 ಟನ್ ಲೋಡ್ ತಡೆದುಕೊಳ್ಳುತ್ತದೆ. ಇದು ಮುಡಕ್ಕೈನಲ್ಲಿ ಶೋಧ ಕಾರ್ಯಾಚರಣೆಗೆ ನೆರವಾಗಲಿದೆ ಎಂದು ಮೇಜರ್ ಜನರಲ್ ವಿ.ಟಿ.ಮ್ಯಾಥ್ಯೂ ಹೇಳಿದ್ದಾರೆ.

ಅರ್ಥ್‍ಮೂವರ್, ಎಕ್ಸವೇಟರ್, ಟ್ರಕ್, ಆ್ಯಂಬುಲೆನ್ಸ್ ಮತ್ತು ಜೀಪ್‍ಗಳನ್ನು ಸಂತ್ರಸ್ತ ಗ್ರಾಮಕ್ಕೆ ಕೊಂಡೊಯ್ಯಲು ಇದರಿಂದ ಸಾಧ್ಯವಾಗಲಿದೆ. ಇದುವರೆಗೆ ಕೇವಲ ಆಫ್‍ರೋಡ್ ಜೀಪ್ ಮಾತ್ರ ಸಂಚರಿಸಬಹುದಾಗಿತ್ತು ಎಂದು ಅವರು ವಿವರಿಸಿದ್ದಾರೆ. 

ತಲಾ 10 ಅಡಿ ಉದ್ದದ ಪ್ಯಾನೆಲ್‍ಗಳನ್ನು ಬೆಂಗಳೂರಿನಿಂದ 20 ಟ್ರಕ್‍ಗಳಲ್ಲಿ ಚೂರಲ್‍ಮಾಲಾಗೆ ಜುಲೈ 30ರಂದು ತರಲಾಗಿತ್ತು. ಇಲ್ಲಿಂದ ಕಾರ್ಯಾಚರಣೆ ಆರಂಭವಾಗಿದ್ದು, 10 ಸ್ಟಿಲ್ ಪ್ಯಾನೆಲ್‍ಗಳು ಒಟ್ಟು 190 ಅಡಿಯ ಸೇತುವೆ ನಿರ್ಮಿಸಿವೆ ಎಂದು ವಿವರಿಸಿದ್ದಾರೆ.

ಮಂಗಳವಾರ ಸಂಜೆ ಮದ್ರಾಸ್ ಎಂಜಿನಿಯರಿಂಗ್ ಗ್ರೀಪ್‍ನ 140 ಮಂದಿ ಅಧಿಕಾರಿಗಳು ಕೆಲಸ ಆರಂಭಿಸಿದ್ದರು. ಪದೇ ಪದೇ ಗಣ್ಯರು ಭೇಟಿ ನೀಡುತ್ತಿದ್ದುದು ಮತ್ತು ವ್ಯತಿರಿಕ್ತ ಹವಾಗುಣ ವಿಳಂಬಕ್ಕೆ ಕಾರಣವಾಯಿತು ಎಂದು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News