ಚಂದಾ ಕೊಚ್ಚಾರ್, ಪತಿಯ ಬಂಧನ ಪ್ರಕರಣ: ಸಿಬಿಐನಿಂದ ಅಧಿಕಾರ ದುರ್ಬಳಕೆ ಎಂದ ಹೈಕೋರ್ಟ್

Update: 2024-02-19 11:39 GMT

ಚಂದಾ ಕೊಚ್ಚಾರ್ (Photo: PTI)

ಮುಂಬೈ: ಬ್ಯಾಂಕ್ ಸಾಲ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆ(ಸಿಬಿಐ)ಯು ಐಸಿಐಸಿಐ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದಾ ಕೊಚ್ಚಾರ್ ಹಾಗೂ ಅವರ ಪತಿ ದೀಪಕ್ ಕೊಚ್ಚಾರ್ ಅವರನ್ನು ಬಂಧಿಸಿರುವ ಕ್ರಮ ವಿವೇಚನಾರಹಿತ ಹಾಗೂ ಕಾನೂನಿಗೆ ಸೂಕ್ತ ಗೌರವ ತೋರದ ವರ್ತನೆಯಾಗಿದ್ದು, ಆ ಮೂಲಕ ಅಧಿಕಾರದ ದುರ್ಬಳಕೆಯಾಗಿದೆ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಇದಕ್ಕೂ ಮುನ್ನ ಫೆಬ್ರವರಿ 6ರಂದು ಕೊಚ್ಚಾರ್ ದಂಪತಿಗಳ ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಿದ್ದ ನ್ಯಾ. ಅನುಜ ಪ್ರಭುದೇಸಾಯಿ ಹಾಗೂ ನ್ಯಾ. ಎನ್.ಆರ್.ಬೋರ್ಕರ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು, ಅವರಿಗೆ ಮತ್ತೊಂದು ನ್ಯಾಯಪೀಠವು ಮಂಜೂರು ಮಾಡಿದ್ದ ಮಧ್ಯಂತರ ಜಾಮೀನನ್ನು ಎತ್ತಿ ಹಿಡಿದಿತ್ತು.

ತಾನೇಕೆ ಕೊಚ್ಚಾರ್ ದಂಪತಿಗಳನ್ನು ಬಂಧಿಸಬೇಕಾಯಿತು ಎಂಬ ಬಗ್ಗೆ ಪ್ರಸ್ತುತ ಸನ್ನಿವೇಶಗಳು ಹಾಗೂ ಅದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಮಂಡಿಸುವಲ್ಲಿ ಕೇಂದ್ರ ತನಿಖಾ ಸಂಸ್ಥೆಯು ವಿಫಲವಾಗಿದೆ ಎಂದು ನ್ಯಾಯಪೀಠವು ಅಭಿಪ್ರಾಯ ಪಟ್ಟಿದ್ದು, ನ್ಯಾಯಾಲಯದ ಆದೇಶವು ಸೋಮವಾರ ಲಭ್ಯವಾಗಿದೆ. ಅಂತಹ ಸನ್ನಿವೇಶಗಳ ಗೈರು ಬಂಧನವನ್ನು ಕಾನೂನು ಬಾಹಿರವಾಗಿಸುತ್ತದೆ ಎಂದೂ ಕೂಡಾ ತನ್ನ ಆದೇಶದಲ್ಲಿ ಅಭಿಪ್ರಾಯ ಪಟ್ಟಿದೆ.

"ಇಂತಹ ಬಂಧನವನ್ನು ವಿವೇಚನಾರಹಿತವಾಗಿ ಹಾಗೂ ಕಾನೂನಿಗೆ ಸೂಕ್ತ ಗೌರವ ನೀಡದೆ ನಡೆಸುವುದು ಅಧಿಕಾರದ ದುರ್ಬಳಕೆಯಾಗುತ್ತದೆ" ಎಂದು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.

ಕೊಚ್ಚಾರ್ ದಂಪತಿಗಳು ತನಿಖೆಯ ಸಂದರ್ಭದಲ್ಲಿ ಸಹಕರಿಸದ ಕಾರಣ ಅವರನ್ನು ಬಂಧಿಸಬೇಕಾಯಿತು ಎಂಬ ಸಿಬಿಐ ವಾದವನ್ನು ತಳ್ಳಿ ಹಾಕಿದ ನ್ಯಾಯಪೀಠವು, ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳಿಗೆ ಮೌನ ವಹಿಸುವ ಹಕ್ಕಿದೆ ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News