ಅರವಿಂದ್ ಕೇಜ್ರಿವಾಲ್ ರಾಜಿನಾಮೆ ನೀಡಬೇಕೊ, ಬೇಡವೊ ಎಂದು ಜನಾಭಿಪ್ರಾಯ ಆರಂಭಿಸಿದ ಆಪ್
ಹೊಸದಿಲ್ಲಿ: ಅರವಿಂದ್ ಕೇಜ್ರಿವಾಲ್ ದಿಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ನೀಡಬೇಕೋ, ಬೇಡವೊ ಎಂಬ ಕುರಿತು ಜನರ ಅಭಿಪ್ರಾಯವನ್ನು ಸಂಗ್ರಹಿಸಲು ಆಮ್ ಆದ್ಮಿ ಪಕ್ಷವು ಶುಕ್ರವಾರದಿಂದ ಮನೆ ಮನೆ ಬಾಗಿಲಿಗೂ ತೆರಳಿ ‘ನಾನೂ ಕೇಜ್ರಿವಾಲ್’ ಎಂಬ ಸಹಿ ಅಭಿಯಾನವನ್ನು ಪ್ರಾರಂಭಿಸಿದೆ. ಒಂದು ವೇಳೆ ಬಿಜೆಪಿಯ ಪಿತೂರಿಯ ಭಾಗವಾಗಿ ಅರವಿಂದ್ ಕೇಜ್ರಿವಾಲ್ ಅವರು ಬಂಧನಕ್ಕೊಳಗಾದರೆ, ಅವರು ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ನೀಡಬೇಕೊ, ಬೇಡವೊ ಎಂಬ ಕುರಿತು ಜನಾಭಿಪ್ರಾಯವನ್ನು ಸಂಗ್ರಹಿಸಲು ಈ ಸಹಿ ಅಭಿಯಾನ ನಡೆಸಲಾಗುತ್ತಿದೆ ಎಂದು ದಿಲ್ಲಿ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ದಿಲ್ಲಿ ಸಚಿವ ಗೋಪಾಲ್ ರೈ ಅವರು ಪೂರ್ವ ದಿಲ್ಲಿಯ ಲಕ್ಷ್ಮಿ ನಗರ ಪ್ರದೇಶದಿಂದ ಮನೆ ಮನೆ ಬಾಗಿಲಿಗೆ ತೆರಳುವ ಈ ಅಭಿಯಾನಕ್ಕೆ ಚಾಲನೆ ನೀಡಿದರು.
“ಮೊದಲ ದಿನವಾದ ಇಂದು ಲಕ್ಷ್ಮಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆ ಬಾಗಿಲಿಗೆ ತೆರಳುವ ಅಭಿಯಾನವನ್ನು ಕೈಗೊಂಡು, ಜನರೊಂದಿಗೆ ಮಾತನಾಡಿದೆವು. ಸಾರ್ವಜನಿಕರಿಗಾಗಿ ಕೇಜ್ರಿವಾಲ್ ಸಾಕಷ್ಟು ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಗಳು ಉಚಿತ ವಿದ್ಯುತ್, ನೀರು, ಆರೋಗ್ಯ ಸೇವೆ ಹಾಗೂ ಶಿಕ್ಷಣವನ್ನು ಒದಗಿಸಿದ್ದಾರೆ ಹಾಗೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಮತ್ತು ಹಿರಿಯ ನಾಗರಿಕರಿಗೆ ಉಚಿತ ಯಾತ್ರಾ ಪ್ರವಾಸಕ್ಕೆ ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ ಅವರು ರಾಜಿನಾಮೆ ನೀಡಬಾರದು. ಬದಲಿಗೆ, ಜೈಲಿನಿಂದಲೇ ಸರ್ಕಾರವನ್ನು ನಡೆಸಬೇಕು ಎಂದು ನಾವು ಇಲ್ಲಿಯವರೆಗೆ ಮಾತನಾಡಿಸಿದ ಜನರು ಹೇಳಿದ್ದಾರೆ. ಈ ಬಂಧನಗಳು ಕಾರ್ಯಸೂಚಿಯ ಅಡಿಯಲ್ಲಿ ನಡೆಯುತ್ತಿವೆ ಎಂದೂ ಜನರು ದೃಢ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ರಾಜಿನಾಮೆ ನೀಡಬಾರದು” ಎಂದು ಗೋಪಾಲ್ ರೈ ಅಭಿಪ್ರಾಯ ಪಟ್ಟರು.
ಇದಕ್ಕೂ ಮುನ್ನ, ಈ ತಿಂಗಳ ಆರಂಭದಲ್ಲಿ ಅಬಕಾರಿ ನೀತಿ ಹಗರಣದ ಆರೋಪದಲ್ಲಿ ಕೇಳಿ ಬಂದಿರುವ ಅಕ್ರಮ ಹಣ ವರ್ಗಾವಣೆ ಕುರಿತ ವಿಚಾರಣೆಗಾಗಿ ತನ್ನ ಮುಂದೆ ಹಾಜರಾಗಬೇಕು ಎಂದು ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿಗೊಳಿಸಿತ್ತು.
ಆದರೆ, ಜಾರಿ ನಿರ್ದೇಶನಾಲಯದ ಎದುರು ವಿಚಾರಣೆಗೆ ಗೈರಾಗಿದ್ದ ಕೇಜ್ರಿವಾಲ್, ತಮಗೆ ನೀಡಲಾಗಿರುವ ಸಮನ್ಸ್ ಕಾನೂನುಬಾಹಿರ ಹಾಗೂ ರಾಜಕೀಯ ಪ್ರಚೋದಿತವಾಗಿರುವುದರಿಂದ ಅದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದರು.