ಕೇಜ್ರಿವಾಲ್‌, ಕವಿತಾ ನ್ಯಾಯಾಂಗ ಬಂಧನ ಅವಧಿ ಇನ್ನೂ 14 ದಿನ ವಿಸ್ತರಣೆ

Update: 2024-04-23 10:48 GMT

ಅರವಿಂದ್‌ ಕೇಜ್ರಿವಾಲ್‌ (Photo: PTI)

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತು ತೆಲಂಗಾಣದ ಬಿಆರ್‌ಎಸ್‌ ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಇನ್ನೂ 14 ದಿನಗಳ ಕಾಲ ದಿಲ್ಲಿಯ ನ್ಯಾಯಾಲಯವೊಂದು ಇಂದು ವಿಸ್ತರಿಸಿದೆ. ಇಬ್ಬರೂ ಪ್ರಸಕ್ತ ತಿಹಾರ್‌ ಜೈಲಿನಲ್ಲಿದ್ದು ಮೇ 7ರಂದು ಅವರನ್ನು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.

ಈ ಇಬ್ಬರ ಹೊರತಾಗಿ ಗೋವಾ ಚುನಾವಣೆ ಸಂದರ್ಭ ಆಪ್‌ನ ಫಂಡ್‌ ಮ್ಯಾನೇಜರ್‌ ಆಗಿದ್ದ ಚರಣ್‌ ಪ್ರೀತ್‌ ಸಿಂಗ್‌ ಅವರ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಲಾಗಿದೆ.

ಮೂವರನ್ನೂ ಇಂದು ವರ್ಚುವಲ್‌ ಕಾನ್ಫರೆನ್ಸಿಂಗ್‌ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ವೈದ್ಯರ ಜೊತೆಗೆ ತಮ್ಮ ಪತ್ನಿಯ ಸಮ್ಮುಖದಲ್ಲಿ ಸಮಾಲೋಚನೆಗೆ ತಮಗೆ ಪ್ರತಿದಿನ 15 ನಿಮಿಷಗಳ ಕಾಲಾವಕಾಶ ಒದಗಿಸಬೇಕೆಂಬ ಕೇಜ್ರಿವಾಲ್‌ ಅವರ ಅಪೀಲನ್ನು ಸೋಮವಾರವಷ್ಟೇ ನ್ಯಾಯಾಲಯ ತಿರಸ್ಕರಿಸಿತ್ತು.

ಅವರಿಗೆ ಅಗತ್ಯ ಚಿಕಿತ್ಸೆ ಒದಗಿಸುವಂತೆ ಹಾಗೂ ಅಗತ್ಯ ಬಿದ್ದರೆ ಏಮ್ಸ್‌ ವೈದ್ಯರ ಸಲಹೆಯಂತೆ ಅವರಿಗೆ ಚಿಕಿತ್ಸೆ ನೀಡಬಹುದೆಂದು ನ್ಯಾಯಾಲಯ ತಿಳಿಸಿತ್ತು.

ಸೋಮವಾರ ಅವರಿಗೆ ಎರಡು ಯುನಿಟ್‌ಗಳ ಲೋ ಡೋಸ್‌ ಇನ್ಸುಲಿನ್‌ ಅನ್ನು ಏಮ್ಸ್‌ ವೈದ್ಯರ ಸಲಹೆಯಂತೆ ನೀಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News