ಕಾರಾಗೃಹದಲ್ಲಿ ಕೇಜ್ರಿವಾಲ್‌ಗೆ ಇನ್ಸುಲಿನ್ ನೀಡದೆ ಹತ್ಯೆಗೈಯಲು ಸಂಚು: ಆಪ್ ಆರೋಪ
ಹೊಸದಿಲ್ಲಿ: ತಿಹಾರ್ ಕಾರಾಗೃಹದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಇನ್ಸುಲಿನ್ ನೀಡದೆ ಹತ್ಯೆಗೈಯಲು ಸಂಚು ನಡೆಯುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಸಚಿವೆ ಆತಿಶಿ ಗುರುವಾರ ಆರೋಪಿಸಿದ್ದಾರೆ.
ಅರವಿಂದ ಕೇಜ್ರಿವಾಲ್ ಅವರ ರಕ್ತದ ಸಕ್ಕರೆ ಪ್ರಮಾಣ ಕಳೆದ ಕೆಲವು ದಿನಗಳಿಂದ ಏರು ಪೇರಾಗುತ್ತಿದೆ. ಕೇಜ್ರಿವಾಲ್ ಅವರು ಇನ್ಸುಲಿನ್ ನೀಡುವಂತೆ ವಿನಂತಿಸುತ್ತಿದ್ದಾರೆ. ಆದರೆ, ಕಾರಾಗೃಹದ ಅಧಿಕಾರಿಗಳು ಇನ್ಸುಲಿನ್ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಡಯಾಬಿಟಿಸ್ ರೋಗಿಗೆ ಇನ್ಸುಲಿನ್ ನಿರಾಕರಿಸುತ್ತಿರುವುದು ಯಾವ ರೀತಿಯ ಪಿತೂರಿ? ಅವರು ಅರವಿಂದ ಕೇಜ್ರಿವಾಲ್ ಅವರನ್ನು ಹತ್ಯೆಗೈಯಲು ಪ್ರಯತ್ನಿಸುತ್ತಿದ್ದಾರೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಅರವಿಂದ ಕೇಜ್ರಿವಾಲ್ ಅವರು ಚುನಾವಣೆಯಲ್ಲಿ ಬಿಜೆಪಿ ಸೋಲಿಸಲಾಗದ ವ್ಯಕ್ತಿ. ಆದುದರಿಂದ ಅರವಿಂದ ಕೇಜ್ರಿವಾಲ್ ಅವರನ್ನು ಕಾರಾಗೃಹದಲ್ಲಿ ಇರಿಸಿ ಹತ್ಯೆಗೈಯಲು ಸಂಚು ರೂಪಿಸಲಾಗುತ್ತಿದೆ ಎಂದು ಆತಿಶಿ ಹೇಳಿದ್ದಾರೆ.
ಅರವಿಂದ ಕೇಜ್ರಿವಾಲ್ ಅವರು ಕಳೆದ 30 ವರ್ಷಗಳಿಂದ ಡಯಾಬಿಟಿಸ್‌ನಿಂದ ಬಳಲುತ್ತಿದ್ದಾರೆ. ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಅವರು ಪ್ರತಿದಿನ 54 ಯೂನಿಟ್ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆತಿಶಿ ಹೇಳಿದರು.
ಡಯಾಬಿಟಿಸ್ ರೋಗಿಯಾಗಿರುವುದರಿಂದ ಹಾಗೂ ಸಕ್ಕರೆಯ ಪ್ರಮಾಣ ಸಾಮಾನ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಪಥ್ಯಾಹಾರ ಅಗತ್ಯವಿರುವುದರಿಂದ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಲು ನ್ಯಾಯಾಲಯ ಅವರಿಗೆ ಅನುಮತಿ ನೀಡಿದೆ. ಆದರೆ, ಇಂದು ಬಿಜೆಪಿ ತನ್ನ ಜಾರಿ ನಿರ್ದೇಶನಾಲಯದ ಮೂಲಕ ಕೇಜ್ರಿವಾಲ್ ಅವರ ಆರೋಗ್ಯವನ್ನು ಹದಗೆಡಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.
ವೈದ್ಯಕೀಯ ಜಾಮೀನು ಪಡೆಯುವ ಉದ್ದೇಶದಿಂದ ಕಾರಾಗೃಹದಲ್ಲಿ ಅರವಿಂದ ಕೇಜ್ರಿವಾಲ್ ಅವರು ಮಾವಿನ ಹಣ್ಣು, ಆಲೂ ಪೂರಿ ಹಾಗೂ ಸಿಹಿ ತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಆಪ್ ಈ ಆರೋಪ ಮಾಡಿದೆ.