ಇಂದು ತಿಹಾರ್ ಜೈಲಿಗೆ ಶರಣಾಗಲಿರುವ ಅರವಿಂದ್ ಕೇಜ್ರಿವಾಲ್
ಹೊಸದಿಲ್ಲಿ: ಜೂನ್ 1ರವರೆಗೆ ತಮಗೆ ಮಂಜೂರಾಗಿದ್ದ ಮಧ್ಯಂಮತರ ಜಾಮೀನು ಅವಧಿ ಮುಕ್ತಾಯಗೊಂಡಿರುವುದರಿಂದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು (ರವಿವಾರ) ತಿಹಾರ್ ಜೈಲಿಗೆ ಶರಣಾಗಲಿದ್ದಾರೆ. ತಿಹಾರ್ ಕೇಂದ್ರೀಯ ಕಾರಾಗೃಹಕ್ಕೆ ಶರಣಾಗುವುದಕ್ಕೂ ಮುನ್ನ, ತಾನು ರಾಜ್ ಘಾಟ್ ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕ ಹಾಗೂ ಕನ್ಹಾಟ್ ಪ್ಲೇಸ್ ನಲ್ಲಿರುವ ಪ್ರಾಚೀನ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಲಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, “ಮಾನ್ಯ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನಾನು 21 ದಿನಗಳ ಕಾಲ ಚುನಾವಣಾ ಪ್ರಚಾರ ನಡೆಸಲು ಜೈಲಿನಿಂದ ಹೊರ ಬಂದಿದ್ದೆ. ನಾನು ಮಾನ್ಯ ಸುಪ್ರೀಂ ಕೋರ್ಟ್ ಗೆ ಭಾರಿ ಆಭಾರಿಯಾಗಿದ್ದೇನೆ. ನಾನಿಂದು ತಿಹಾರ್ ಜೈಲಿಗೆ ಮರಳುವ ಮೂಲಕ ಶರಣಾಗಲಿದ್ದೇನೆ. ನಾನು ಮಧ್ಯಾಹ್ನ 3 ಗಂಟೆಗೆ ಮನೆ ತೊರೆಯಲಿದ್ದು, ಮೊದಲು ನಾನು ರಾಜ್ ಘಾಟ್ ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಲಿದ್ದೇನೆ. ಅಲ್ಲಿಂದ ಹನುಮಾನ್ ದೇವರ ಆಶೀರ್ವಾದ ಪಡೆಯಲು ಕನ್ಹಾಟ್ ಪ್ಲೇಸ್ ನಲ್ಲಿರುವ ಹನುಮಾನ್ ದೇವಾಲಯಕ್ಕೆ ತೆರಳಲಿದ್ದೇನೆ. ಇದಾದ ನಂತರ, ನಾನು ಪಕ್ಷದ ಕಚೇರಿಗೆ ತೆರಳಿ, ಎಲ್ಲ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರನ್ನು ಭೇಟಿಯಾಗಲಿದ್ದೇನೆ. ಅಲ್ಲಿಂದ ನಾನು ಮತ್ತೆ ತಿಹಾರ್ ಜೈಲಿಗೆ ಮರಳಲಿದ್ದೇನೆ. ನೀವೆಲ್ಲರೂ ನಿಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳಿ. ನೀವು ಸಂತೋಷವಾಗಿದ್ದರೆ, ನಿಮ್ಮ ಕೇಜ್ರಿವಾಲ್ ಕೂಡಾ ಜೈಲಿನಲ್ಲಿ ಸಂತೋಷವಾಗಿರುತ್ತಾನೆ” ಎಂದು ಬರೆದುಕೊಂಡಿದ್ದಾರೆ.
ಮೇ 10ರಂದು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಸುಪ್ರೀಂ ಕೋರ್ಟ್ ಮಂಜೂರು ಮಾಡಿದ್ದ ಮಧ್ಯಂತರ ಜಾಮೀನಿನ ಮೇಲೆ ಅರವಿಂದ್ ಕೇಜ್ರಿವಾಲ್ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದರು. 21 ದಿನಗಳ ಅವಧಿಯ ಜಾಮೀನು ಮಂಜೂರು ಮಾಡಿದ್ದ ಸುಪ್ರೀಂ ಕೋರ್ಟ್, ಜೂನ್ 2ರಂದು ತಿಹಾರ್ ಜೈಲಿನ ಅಧೀಕ್ಷಕರೆದುರು ಶರಣಾಗಬೇಕೆಂದು ಸೂಚಿಸಿತ್ತು.