ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ, ಹಲವು ಆಪ್ ನಾಯಕರ ನಿವಾಸಗಳ ಮೇಲೆ ಈಡಿ ದಾಳಿ
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಹಾಗೂ ಆಪ್ ನ ಕೆಲ ಮುಖಂಡರ ನಿವಾಸಗಳ ಸಹಿತ ಒಟ್ಟು 12 ಕಡೆಗಳಲ್ಲಿ ಇಂದು ಜಾರಿ ನಿರ್ದೇಶನಾಲಯ (ಈಡಿ) ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈ ದಾಳಿಗಳು ನಡೆದಿವೆ ಎಂದು ಹೇಳಲಾಗಿದೆ.
ಕೇಜ್ರಿವಾಲ್ ಅವರ ಆಫ್ತ ಕಾರ್ಯದರ್ಶಿ ಬಿಭವ್ ಕುಮಾರ್ ದಿಲ್ಲಿ ಜಲ ಮಂಡಳಿಯ ಮಾಜಿ ಸದಸ್ಯ ಶಲಭ್ ಕುಮಾರ್ ಹಾಗೂ ಆಪ್ ಕೋಶಾಧಿಕಾರಿ ND ಗುಪ್ತಾ ಅವರ ನಿವಾಸಗಳ ಮೇಲೂ ದಾಳಿ ನಡೆದಿವೆ.
ದಿಲ್ಲಿ ಜಲ ಮಂಡಳಿಯ ಟೆಂಡರಿಂಗ್ ಪ್ರಕ್ರಿಯೆಯಲ್ಲಿನ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿದೆ.
ಸಿಬಿಐ ಹಾಗೂ ದಿಲ್ಲಿ ಸರ್ಕಾರದ ಭ್ರಷ್ಟಾಚಾರ ನಿಗ್ರಹ ದಳ ದಾಖಲಿಸಿರುವ ಎಫ್ಐಆರ್ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಈ ಆರೋಪಿತ ಅವ್ಯವಹಾರಗಳ ಕುರಿತಂತೆ ತನಿಖೆ ನಡೆಸುತ್ತಿದೆ.
ಇಲೆಕ್ಟ್ರೋಮ್ಯಾಗ್ನೆಟಿಕ್ ಫ್ಲೋ ಮೀಟರ್ಗಳ ಪೂರೈಕೆ, ಅಳವಡಿಕೆ, ಪರೀಕ್ಷೆ ಮತ್ತು ಕಾರ್ಯಾರಂಭಕ್ಕಾಗಿ ಟೆಂಡರ್ ಅನ್ನು ಒಂದು ಕಂಪೆನಿಗೆ ವಹಿಸಲು ದಿಲ್ಲಿ ಜಲ ಮಂಡಳಿ ಹೆಚ್ಚಿನ ಉತ್ಸುಕತೆ ತೋರಿ ಟೆಂಡರ್ ನೀಡಿತ್ತು ಎಂದು ಸಿಬಿಐ ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.
ಕಂಪೆನಿಯು ತಾಂತ್ರಿಕ ಅರ್ಹತೆ ಹೊಂದಿರದೇ ಇದ್ದರೂ ರೂ 38 ಕೋಟಿ ಮೌಲ್ಯದ ಗುತ್ತಿಗೆಗಳನ್ನು ವಹಿಸಲಾಗಿತ್ತು ಹಾಗೂ ಅದು ಫೋರ್ಜರಿ ಮಾಡಿದ ದಾಖಲೆಗಳನ್ನು ಬಳಸಿ ಬಿಡ್ ಪಡೆದುಕೊಂಡಿತ್ತು ಎಂದು ಹೇಳಲಾಗಿದೆ.
ಎನ್ಕೆಜಿ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎಂಬ ಹೆಸರಿನ ಈ ಕಂಪೆನಿಗೆ ಆಗಿನ ಜಲ ಮಂಡಳಿಯ ಮುಖ್ಯ ಇಂಜಿನಿಯರ್ ಜಗದೀಶ್ ಕುಮಾರ್ ಅರೋರ ಗುತ್ತಿಗೆ ನೀಡಿದ್ದರು ಎಂದು ಎಫ್ಐಆರ್ ಹೇಳಿದೆ.
ಜನವರಿ 31 ರಂದು ಅರೋರಾ ಹಾಗೂ ದಿಲ್ಲಿ ಜಲ ಮಂಡಳಿ ಗುತ್ತಿಗೆದಾರ ಅನಿಲ್ ಕುಮಾರ್ ಅಗರ್ವಾಲ್ ಎಂಬವರನ್ನು ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಬಂಧಿಸಲಾಗಿತ್ತು.