ಒಂದೇ ತಿಂಗಳಲ್ಲಿ ಮೂರು ಬಾರಿ ಅಸ್ಸಾಂ ಕಾಂಗ್ರೆಸ್ ವಕ್ತಾರ ಬಂಧನ!

ರೀತಮ್ ಸಿಂಗ್ | PC : @ReetamSingh/FB
ಹೊಸದಿಲ್ಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಅವರ ಕಟು ಟೀಕಾಕಾರರಾಗಿರುವ ಕಾಂಗ್ರೆಸ್ ವಕ್ತಾರ ರೀತಮ್ ಸಿಂಗ್ ಅವರನ್ನು ಒಂದು ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಸಿಎಂ ಶರ್ಮಾ ಅವರು ಗೃಹ ಇಲಾಖೆಯನ್ನೂ ನಿಭಾಯಿಸುತ್ತಿದ್ದಾರೆ ಎನ್ನುವುದು ಗಮನಾರ್ಹ.
ಸಿಎಂ ಆಪ್ತ ಎನಿಸಿದ ಬಿಜೆಪಿ ಶಾಸಕ ಮನಬ್ ದೇಖಾ ಅವರ ಪತ್ನಿ ನೀಡಿದ ದೂರಿನ ಮೇರೆಗೆ ಮಾರ್ಚ್ 15ರಂದು ಲಖೀಂಪುರ ಪೊಲೀಸರು ಸಿಂಗ್ ಅವರನ್ನು ಬಂಧಿಸಿದ್ದರು. ಕಾಂಗ್ರೆಸ್ ವಕ್ತಾರ ಎಕ್ಸ್ ನಲ್ಲಿ ಅಪ್‍ಲೋಡ್ ಮಾಡಿದ ಜಾಲತಾಣ ಪೋಸ್ಟ್ ವಿರುದ್ಧ ದೇಖಾ ದೂರು ನೀಡಿದ್ದರು. ತಮ್ಮ ಪತಿ ಮತ್ತು ತಂದೆಯನ್ನು ಅವಮಾನಿಸಿದ್ದಾರೆ ಎಂದು ದೂರು ನೀಡಲಾಗಿತ್ತು. ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ರೀತಮ್ ಅವರನ್ನು ಬಂಧಿಸಲಾಗಿತ್ತು. ಜತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಗಳಡಿ ಮಾನನಷ್ಟ ಪ್ರಕರಣವನ್ನೂ ದಾಖಲಿಸಲಾಗಿತ್ತು. ಆದಾಗ್ಯೂ ಗುವಾಹತಿ ಹೈಕೋರ್ಟ್ ಮಾರ್ಚ್ 28ರಂದು ನೀಡಿದ ಜಾಮೀನು ಆಧಾರದಲ್ಲಿ ಸಿಂಗ್ ಬಿಡುಗಡೆಯಾಗಿದ್ದರು.
ಬಿಜೆಪಿ ನಾಯಕ ಧೋಂತಿ ಶರ್ಮಾ ನೀಡಿದ ದೂರಿನ ಆಧಾರದಲ್ಲಿ ಏಪ್ರಿಲ್ 12ರಂದು ಮೊರಿಗಾಂವ್ ಪೊಲೀಸರು ಇದೇ ಕಾಯ್ದೆಗಳಡಿ ಸಿಂಗ್ ಅವರನ್ನು ಬಂಧಿಸಿದ್ದರು. ಮೊರಿಗಾಂವ್ ನ್ಯಾಯಾಲಯದ ಜಾಮೀನಿನ ಆಧಾರದಲ್ಲಿ ಬಿಡುಗಡೆಯಾದ ಬೆನ್ನಲ್ಲೇ ಜಗಿರೋಡ್ ಪೊಲೀಸ್ ಠಾಣೆ ಪೊಲೀಸರ ತಂಡ ಯುವ ವಿರೋಧ ಪಕ್ಷದ ವಕ್ತಾರನನ್ನು ವಶಕ್ಕೆ ಪಡೆದಿದೆ.
ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊ ತುಣುಕಿನಲ್ಲಿ, ಜಗಿರೋಡ್ ಪೊಲೀಸರ ವ್ಯಾನ್‍ನಲ್ಲಿ ಮಗನ ಜತೆ ಮಾತನಾಡುವ ಪ್ರಯತ್ನ ಮಾಡಿರುವುದು ಕಂಡುಬರುತ್ತಿದೆ. ಏಕೆ ಮಗನನ್ನು ಮತ್ತೆ ಬಂಧಿಸಲಾಗುತ್ತಿದೆ ಎಂದು ಕೇಳುತ್ತಿರುವಾಗ ಪೊಲೀಸರು ಅದಕ್ಕೆ ಅವಕಾಶ ನೀಡಿಲ್ಲ. ತಕ್ಷಣ ತಂದೆ ವಾಹನದ ಮುಂದೆ ಮಲಗಿ ವಾಹನವನ್ನು ಅಡ್ಡಗಟ್ಟಿದ್ದಾರೆ. ಅವರನ್ನು ತೆರವುಗೊಳಿಸಿದ ಪೊಲೀಸರು, ವಿವರ ತಿಳಿಯಲು ಠಾಣೆಗೆ ಬಂದು ಮಾತನಾಡುವಂತೆ ಸೂಚಿಸಿದ್ದಾರೆ.
ಸಿಂಗ್ ಅವರನ್ನು ಮತ್ತೆ ಬಂಧಿಸಿರುವ ಕ್ರಮವನ್ನು ಕಾಂಗ್ರೆಸ್ ಮುಖ್ಯಸ್ಥ ಭೂಪೇನ್ ಕುಮಾರ್ ಬರೋಹ್ ಖಂಡಿಸಿದ್ದಾರೆ. ಜನರ ವಾಕ್ ಸ್ವಾತಂತ್ರ್ಯವನ್ನು ಸಿಎಂ ಮೊಟಕುಗೊಳಿಸುತ್ತಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.