14 ಕೋಟಿ ಭಾರತೀಯರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರಯೋಜನಗಳಿಂದ ವಂಚಿತರಾಗಿದ್ದಾರೆ: ಕಾಂಗ್ರೆಸ್

Update: 2024-06-10 09:44 GMT

ಜೈರಾಂ ರಮೇಶ್‌ (PTI) 

ಹೊಸದಿಲ್ಲಿ: 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಈವರೆಗೂ ಕೈಗೊಳ್ಳಲಾಗಿಲ್ಲ, ಪರಿಣಾಮವಾಗಿ ಕನಿಷ್ಠ 14 ಕೋಟಿ ಭಾರತೀಯರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಐ)ಯಡಿ ಪ್ರಯೋಜನಗಳಿಂದ ವಂಚಿತರಾಗಿದ್ದಾರೆ ಎಂದು ಸೋಮವಾರ ಹೇಳಿರುವ ಕಾಂಗ್ರೆಸ್, ಜನಗಣತಿಯನ್ನು ಯಾವಾಗ ನಡೆಸಲಾಗಿತ್ತದೆ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿಯವರು ಶೀಘ್ರವೇ ದೇಶಕ್ಕೆ ತಿಳಿಸಬೇಕು ಎಂದು ಹೇಳಿದೆ.

ಸಂವಿಧಾನದಲ್ಲಿ ಹೇಳಲಾಗಿರುವ ಸಾಮಾಜಿಕ ನ್ಯಾಯಕ್ಕೆ ನಿಜವಾದ ಅರ್ಥ ನೀಡಲು ಜನಗಣತಿಯು ಒಬಿಸಿಗಳೆಂದು ವರ್ಗೀಕರಿಸಲಾಗಿರುವ ಸಮುದಾಯಗಳ ಜನಸಂಖ್ಯೆ ಕುರಿತು ದತ್ತಾಂಶಗಳನ್ನೂ ಒದಗಿಸಬೇಕು ಎಂದೂ ಕಾಂಗ್ರೆಸ್ ಆಗ್ರಹಿಸಿದೆ.

ಕೇಂದ್ರ ಸರಕಾರವು ಪ್ರತಿ ಹತ್ತು ವರ್ಷಗಳಿಗೊಮ್ಮೆ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಅಗತ್ಯವಾಗಿರುವ ಜನಗಣತಿಯನ್ನು ನಡೆಸುತ್ತದೆ. ಕೊನೆಯ ಜನಗಣತಿ 2021ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಮೋದಿಯವರು ಅದನ್ನು ಮಾಡಲಿಲ್ಲ. ಅದರ ತಕ್ಷಣದ ಪರಿಣಾಮವೆಂದರೆ ಕನಿಷ್ಠ 14 ಕೋಟಿ ಭಾರತೀಯರು ಈಗ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಎಂದು ಮರುನಾಮಕರಣಗೊಂಡಿರುವ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013ರಡಿ ಪ್ರಯೋಜನಗಳಿಂದ ವಂಚಿತರಾಗಿದ್ದಾರೆ ಎಂದು ಜೈರಾಂ ರಮೇಶ್ ಹೇಳಿದರು.

1951ರಿಂದ ನಡೆಸಲಾದ ದಶವಾರ್ಷಿಕ ಜನಗಣತಿಗಳು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಯನ್ನು ಒದಗಿಸಿವೆ ಎಂದು ಬೆಟ್ಟು ಮಾಡಿದ ಅವರು,ನವೀಕೃತ ಜನಗಣತಿಯು ಒಬಿಸಿಗಳೆಂದು ವರ್ಗೀಕರಿಸಲಾಗಿರುವ ಸಮುದಾಯಗಳ ಜನಸಂಖ್ಯೆ ಕುರಿತು ದತ್ತಾಂಶಗಳನ್ನೂ ಒದಗಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ದೇಶಾದ್ಯಂತ ಜಾತಿ ಸಮೀಕ್ಷೆಯನ್ನು ನಡೆಸುವುದಾಗಿ ಭರವಸೆ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News