ಇಸ್ರೇಲ್-ಫೆಲೆಸ್ತೀನ್ ಹಿಂಸಾಚಾರದಲ್ಲಿ ಕನಿಷ್ಠ 17 ಮಂದಿ ಪತ್ರಕರ್ತರು ಮೃತ್ಯು: ಸಿಪಿಜೆ
ಹೊಸದಿಲ್ಲಿ: ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ನಡೆಯುತ್ತಿರುವ ಹಿಂಸಾಚಾರದಲ್ಲಿ ಕನಿಷ್ಠ ಪಕ್ಷ 17 ಪತ್ರಕರ್ತರು ಸೇರಿದಂತೆ 4,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ ವರದಿಯಲ್ಲಿ ಹೇಳಲಾಗಿದೆ. ಮೃತಪಟ್ಟಿರುವ ಪತ್ರಕರ್ತರ ಪೈಕಿ 13 ಮಂದಿ ಫೆಲೆಸ್ತೀನ್, ಮೂರು ಮಂದಿ ಇಸ್ರೇಲ್ ಹಾಗೂ ಓರ್ವ ಲೆಬನಾನ್ ಪತ್ರಕರ್ತ ಸೇರಿದ್ದಾರೆ ಎಂದು newslaundry.com ವರದಿ ಮಾಡಿದೆ.
ಆದರೆ, ಈ ಎಲ್ಲ ಪತ್ರಕರ್ತರು ಕರ್ತವ್ಯನಿರತರಾಗಿದ್ದಾಗ ಮೃತಪಟ್ಟಿದ್ದಾರೆಯೆ ಎಂಬ ಕುರಿತು ವರದಿಯಲ್ಲಿ ಅನಿಶ್ಚಿತತೆ ಇದೆ.
ಅಮೆರಿಕಾದ ಲಾಭ ರಹಿತ ಸಂಸ್ಥೆಯಾದ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ ಪ್ರಕಾರ, ಇಸ್ರೇಲ್-ಫೆಲೆಸ್ತೀನ್ ನಡುವಿನ ಹಿಂಸಾಚಾರದಲ್ಲಿ ಎಂಟು ಮಂದಿ ಪತ್ರಕರ್ತರಿಗೆ ಗಾಯಗಳಾಗಿದ್ದು, ಮೂರು ಮಂದಿ ಪತ್ರಕರ್ತರು ಕಾಣೆಯಾಗಿದ್ದಾರೆ ಅಥವಾ ಬಂಧನಕ್ಕೊಳಗಾಗಿದ್ದಾರೆ ಎಂದು ಹೇಳಲಾಗಿದೆ. “ತಾನು ಇತರ ಪತ್ರಕರ್ತರ ಹತ್ಯೆ, ಕಾಣೆ, ಬಂಧನ, ಗಾಯ ಅಥವಾ ಬೆದರಿಕೆಗೊಳಗಾಗಿರುವುದು ಹಾಗೂ ಮಾಧ್ಯಮ ಕಚೇರಿಗಳು ಮತ್ತು ಪತ್ರಕರ್ತರ ನಿವಾಸಗಳಿಗೆ ಹಾನಿಯಾಗಿರುವ ದೃಢಪಡದ ವರದಿಗಳ ಕುರಿತು ತನಿಖೆ ನಡೆಸುತ್ತಿದ್ದೇನೆ” ಎಂದು ಸಿಪಿಜೆ ಹೇಳಿದೆ.
“ಪತ್ರಕರ್ತರು ಬಿಕ್ಕಟ್ಟಿನ ಸಮಯದಲ್ಲಿ ಮುಖ್ಯವಾದ ಕೆಲಸವನ್ನು ಮಾಡುವುದರಿಂದ ಯಾವುದೇ ಯುದ್ಧನಿರತ ದೇಶವು ಅವರನ್ನು ಗುರಿಯಾಗಿಸಿಕೊಳ್ಳಬಾರದು ಎಂಬುದು ಸಿಪಿಜೆ ಅಭಿಪ್ರಾಯವಾಗಿದೆ” ಎಂದು ಸಿಪಿಜೆಯ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಕಾರ್ಯಕ್ರಮಗಳ ಸಮನ್ವಯಾಧಿಕಾರಿ ಶೆರೀಫ್ ಮನ್ಸೌರ್ ಮನವಿ ಮಾಡಿದ್ದಾರೆ. “ಈ ಹೃದಯವಿದ್ರಾವಕ ಬಿಕ್ಕಟ್ಟನ್ನು ವರದಿ ಮಾಡಲು ವಿಶ್ವಾದ್ಯಂತ ಇರುವ ಎಲ್ಲ ಪತ್ರಕರ್ತರೂ ಭಾರಿ ತ್ಯಾಗ ಮಾಡುತ್ತಿದ್ದಾರೆ. ಹೀಗಾಗಿ ಉಭಯ ಪಕ್ಷಗಳೂ ಅವರ ಸುರಕ್ಷತೆಯನ್ನು ಖಾತ್ರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಮೃತಪಟ್ಟಿರುವ ಪತ್ರಕರ್ತರ ಪೈಕಿ ಮುಹಮ್ಮದ್ ಬಲೌಶಾ, ಸಲಾಂ ಮೆಮಾ, ಇಸ್ಸಾಂ ಭರ್, ಹುಸಮ್ ಮುಬಾರಕ್, ಇಸ್ಸಾಮ್ ಅಬ್ದಲ್ಲಾ, ಅಹಮದ್ ಶೆಹಾಬ್, ಮುಹಮ್ಮದ್ ಫಯೇಝ್ ಅಬು ಮತರ್, ಸಯೀದ್ ಅಲ್-ತವೀಲ್, ಮುಹಮ್ಮದ್ ಸೊಭ್, ಹೀಶಮ್ ಅಲ್ನವಾಝಾ, ಅಸ್ಸಾದ್ ಶಮ್ಲಾಖ್, ಶಾಯಿ ರೆಗೆವ್, ಅಯೆಲೆತ್ ಅರ್ನಿನ್, ಯಾನಿವ್ ಝೋಹರ್, ಮುಹಮ್ಮದ್ ಅಲ್-ಸಲ್ಹಿ, ಮುಹಮ್ಮದ್ ಜರ್ಘೋನ್ ಹಾಗೂ ಇಬ್ರಾಹಿಂ ಮುಹಮ್ಮದ್ ಲಫಿ ಸೇರಿದ್ದಾರೆ.