ಸಂಸತ್ ಮೇಲೆ ದಾಳಿ: ಹುತಾತ್ಮ ಭದ್ರತಾ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ
ಹೊಸದಿಲ್ಲಿ: 2001ರಲ್ಲಿ ಈ ದಿನ ಸಂಸತ್ ಭವನದ ಮೇಲೆ ದಾಳಿ ನಡೆಸಿದ ಭಯೋತ್ಪಾದಕರ ವಿರುದ್ಧ ಹೋರಾಡಿ ಪ್ರಾಣ ತ್ಯಾಗ ಮಾಡಿರುವ ಭದ್ರತಾ ಸಿಬ್ಬಂದಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
‘‘2001ರಲ್ಲಿ ಸಂಸತ್‌ನ ಮೇಲೆ ದಾಳಿ ನಡೆಸಿದ ಭಯೋತ್ಪಾದಕರ ವಿರುದ್ಧ ಹೋರಾಡಿ ಹುತಾತ್ಮರಾಗಿರುವ ಧೀರ ಭದ್ರತಾ ಸಿಬ್ಬಂದಿಯನ್ನು ನಾವಿಂದು ಸ್ಮರಿಸುತ್ತೇವೆ ಹಾಗೂ ಅವರಿಗೆ ಹೃದಯ ತುಂಬಿದ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಅಪಾಯದ ಪರಿಸ್ಥಿತಿಯಲ್ಲಿ ಅವರು ತೋರಿದ ಧೈರ್ಯ ಮತ್ತು ಮಾಡಿರುವ ತ್ಯಾಗವು ನಮ್ಮ ದೇಶದ ಸ್ಮತಿಯಲ್ಲಿ ಶಾಶ್ವತವಾಗಿ ಅಚ್ಚಾಗಿರುತ್ತದೆ’’ ಎಂದು ಅವರು ಬಣ್ಣಿಸಿದ್ದಾರೆ.
ಸಂಸತ್ ಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಲೋಕಸಭಾ ಸ್ಪೀಕರ್ ಓಮ್ ಬಿರ್ಲಾ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
2001 ಡಿಸೆಂಬರ್ 13ರಂದು ಸಂಸತ್ ಮೇಲೆ ದಾಳಿ ನಡೆಸಿದ ಎಲ್ಲಾ ಐವರು ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದಕರನ್ನು ಭದ್ರತಾ ಸಿಬ್ಬಂದಿ ಕೊಂದಿದ್ದಾರೆ. ಆದರೆ, ಈ ಕಾರ್ಯಾಚರಣೆಯಲ್ಲಿ ಎಂಟು ಮಂದಿ ಭದ್ರತಾ ಸಿಬ್ಬಂದಿ ಸೇರಿದಂತೆ ಒಂಭತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.