ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲಿನ ದಾಳಿ ; ದೇಶದ 5.5 ಲಕ್ಷ ಮಸೀದಿಗಳಿಂದ ಭಯೋತ್ಪಾದಕರಿಗೆ ಕಟು ಸಂದೇಶ

Update: 2025-04-23 22:14 IST
ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲಿನ ದಾಳಿ ; ದೇಶದ 5.5 ಲಕ್ಷ ಮಸೀದಿಗಳಿಂದ ಭಯೋತ್ಪಾದಕರಿಗೆ ಕಟು ಸಂದೇಶ

PC : PTI 

  • whatsapp icon

ಹೊಸದಿಲ್ಲಿ: ಕಾಶ್ಮೀರದ ಪಹಲ್ಗಾಮ್ ನಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ಮುಸ್ಲಿಂ ಸಂಘಟನೆಗಳು ಮಂಗಳವಾರ ಖಂಡಿಸಿವೆ.

ಪ್ರವಾಸಿಗರನ್ನೇ ಗುರಿಯಾಗಿಸಿ ಪಹಲ್ಗಾಮ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ರಾಜ್ಯದ ಮೂವರು ಸೇರಿದಂತೆ ಕನಿಷ್ಠ 28 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.

‘ಭಯೋತ್ಪಾದನೆ ಎಂಬುದು ಕ್ಯಾನ್ಸರ್ ಇದ್ದಂತೆ. ಇದು ಇಸ್ಲಾಂ ಬೋಧಿಸುವ ಶಾಂತಿ ನೀತಿಯ ವಿರುದ್ಧ’ ಎಂದು ಜಮಾತ್ ಉಲೆಮಾ ಎ ಹಿಂದ್ ಹೇಳಿದೆ.

ಜಮಾತ್ ಉಲೆಮಾ ಎ ಹಿಂದ್ ಅಧ್ಯಕ್ಷ ಮೌಲಾನಾ ಅರ್ಶದ್ ಮದನಿ ಅವರು ಪಹಲ್ಗಾಮ್ ಘಟನೆಯನ್ನು ಕಟುವಾಗಿ ಖಂಡಿಸಿದ್ದಾರೆ. ‘ಇದು ಹೇಡಿಗಳ ಕೃತ್ಯ. ಅಮಾಯಕರನ್ನು ಕೊಲ್ಲುವವರು ಮನುಷ್ಯರಲ್ಲ, ಮೃಗಗಳು. ಭಯೋತ್ಪಾದನೆಗೆ ಇಸ್ಲಾಂನಲ್ಲಿ ಅವಕಾಶವೇ ಇಲ್ಲ. ಇಂಥ ಕೃತ್ಯದ ವಿರುದ್ಧ ಪ್ರತಿಯೊಬ್ಬರೂ ದ್ವನಿ ಎತ್ತಬೇಕು. ದುರಂತದಲ್ಲಿ ಮಡಿದವರ ಕುಟುಂಬದವರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ’ ಎಂದು ಅವರು ಹೇಳಿದ್ದಾರೆ.

‘ದಾಳಿಯ ನಂತರ ಸೇನಾಪಡೆ ಸಿಬ್ಬಂದಿ ಬರುವವರೆಗೂ ಸ್ಥಳೀಯರು ದಾಳಿಗೊಳಗಾದವರಿಗೆ ನೆರವಾಗಿದ್ದಾರೆ. ಇದು ಮನುಷ್ಯತ್ವಕ್ಕೆ ಸಾಕ್ಷಿ. ಕಾಶ್ಮೀರದ ಸಾಮಾನ್ಯ ಜನರು ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ. ಹಲವೆಡೆ ಪ್ರತಿಭಟನೆಗಳೂ ನಡೆದಿವೆ. ಶಾಂತಿ, ಏಕತೆ ಮತ್ತು ಅಭಿವೃದ್ಧಿಯನ್ನು ಇಲ್ಲಿನ ಜನರು ಬಯಸುತ್ತಿದ್ದಾರೆಯೇ ಹೊರತು, ತೀವ್ರವಾದಿಗಳಿಗೆ ಬೆಂಬಲ ನೀಡುವುದಕ್ಕಲ್ಲ’ ಎಂದು ಮೌಲಾನಾ ಅರ್ಶದ್ ಮದನಿ ಹೇಳಿದ್ದಾರೆ.

‘ಇದು ದ್ವೇಷವನ್ನು ಬಿತ್ತುವ ಸಮಯವಲ್ಲ. ಮಾಧ್ಯಮಗಳು ಏಕಮುಖವಾದ ಸುದ್ದಿಗಳನ್ನು ಪ್ರಸಾರ ಮಾಡುವ ಬದಲು, ಸಮಾಜದಲ್ಲಿ ಸೌಹಾರ್ದತೆ ಬಿತ್ತುವ ಸುದ್ದಿಗಳನ್ನು ಪ್ರಸಾರ ಮಾಡಬೇಕು’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಜಮಾತ್ ಎ ಇಸ್ಲಾಮಿ ಹಿಂದ್ ಅಧ್ಯಕ್ಷ ಸಯ್ಯದ್ ಸಾದಾತುಲ್ಲಾ ಹುಸೈನಿ ತಮ್ಮ ಹೇಳಿಕೆಯಲ್ಲಿ, ‘ಪಹಲ್ಗಾಮ್ ನಲ್ಲಿ ನಡೆದ ಹೀನ ಕೃತ್ಯ ಖಂಡನೀಯ. ಮುಗ್ದ ಜೀವಗಳನ್ನು ಕಳೆದುಕೊಂಡಿರುವುದು ನಿಜಕ್ಕೂ ನೋವಿನ ಸಂಗತಿ. ಮೃತರ ಕುಟುಂಬದವರೊಂದಿಗೆ ನಾವಿದ್ದೇವೆ. ಇಂಥ ಅಮಾನುಷ ಕೃತ್ಯಕ್ಕೆ ಯಾವುದೇ ಸಮರ್ಥನೆ ಇಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಅಖಿಲ ಭಾರತ ಇಮಾಮ್ ಸಂಘಟನೆಯ ಮುಖ್ಯಸ್ಥ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಪ್ರತಿಕ್ರಿಯಿಸಿ, ‘ದೇಶದಲ್ಲಿ ಸುಮಾರು 5.5 ಲಕ್ಷ ಮಸೀದಿಗಳಿವೆ. ಭಯೋತ್ಪಾದನೆ ವಿರುದ್ಧ ಅವೆಲ್ಲವುಗಳಿಂದಲೂ ಕಟು ಸಂದೇಶ ರವಾನಿಸಲಾಗುವುದು. ಶುಕ್ರವಾರದ ವಿಶೇಷ ಪ್ರಾರ್ಥನೆಯಲ್ಲಿ ದುರಂತದಲ್ಲಿ ಮಡಿದವರಿಗಾಗಿ ಪ್ರಾರ್ಥಿಸಲಾಗುವುದು’ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News