ಅಮೆರಿಕ ಅಕ್ರಮ ಪ್ರವೇಶಕ್ಕೆ ಯತ್ನ; ಶಾರ್ಜಾದಲ್ಲಿ ಸಿಲುಕಿಕೊಂಡ 230 ಭಾರತೀಯರು
ಹೊಸದಿಲ್ಲಿ: 170 ಗುಜರಾತಿಗಳು ಸೇರಿದಂತೆ 230 ಭಾರತೀಯರು ಅಕ್ರಮ ಅಮೆರಿಕ ಪ್ರವೇಶ ಯತ್ನದ ವೇಳೆ ಸಿಕ್ಕಿಹಾಕಿಕೊಂಡಿದ್ದಾರೆ. ಅಕ್ರಮವಾಗಿ ಅಮೆರಿಕ ಪ್ರವೇಶಿಸುವ ವಿಫಲ ಯತ್ನದಲ್ಲಿ 230 ಭಾರತೀಯರು ಶಾರ್ಜಾದಲ್ಲಿ ಸಿಲುಕಿಕೊಂಡಿದ್ದಾರೆ.
ಅವರಿಗೆಲ್ಲ ದುಬೈನಿಂದ ಬ್ರೆಝಿಲ್‌ಗೆ ಚಾರ್ಟರ್ಡ್ ಫ್ಲೈಟ್‌ನ ಭರವಸೆಯನ್ನು ಏಜೆಂಟ್ ಗಳು ನೀಡಿದ್ದರೆನ್ನಲಾಗಿದೆ. ನಂತರ ಮೆಕ್ಸಿಕೊ ಮೂಲಕ ಅಮೆರಿಕೆಗೆ ಕಳಿಸಲಾಗುವುದು ಎಂದು ಅವರಿಗೆ ಹೇಳಲಾಗಿತ್ತು. ಏಜೆಂಟರು ನಡೆಸಿದ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದ್ದು, ಅವರಿಂದ ಆಮಿಷಕ್ಕೊಳಗಾಗಿದ್ದವರು ಸಿಕ್ಕಿಹಾಕಿಕೊಂಡಿದ್ದಾರೆ.
ದೆಹಲಿ ಮತ್ತು ಪಂಜಾಬ್‌ನ ಸುಮಾರು 60 ಜನರೂ ಸಿಕ್ಕಿಬಿದ್ದಿರುವವರಲ್ಲಿ ಸೇರಿದ್ದಾರೆ.
ಮೂಲಗಳ ಪ್ರಕಾರ, ಏಜೆಂಟರು ಚಾರ್ಟರ್ಡ್ ವಿಮಾನವನ್ನು ಕಾಯ್ದಿರಿಸಲು ಮುಂಗಡವಾಗಿ 3 ಕೋಟಿ ಸಂಗ್ರಹಿಸಿದ್ದರು, ಆರಂಭದಲ್ಲಿ ಡಿಸೆಂಬರ್ 11 ರಂದು ದುಬೈನಿಂದ ಹೊರಡಲು ಯೋಜಿಸಲಾಗಿತ್ತು. ಆದರೆ ಮೆಕ್ಸಿಕೊ ಮತ್ತು ಅಮೆರಿಕ ನಡುವಿನ ಗಡಿ ಪರಿಸ್ಥಿತಿ ಸರಿಯಿರದೆ ಇದ್ದುದರಿಂದ ಡಿಸೆಂಬರ್ 20 ಕ್ಕೆ ಮುಂದೂಡಲಾಯಿತು.
ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ಮೊದಲು ಅವರನ್ನು ಅಮೆರಿಕಕ್ಕೆ ತಲುಪಿಸುವ ಭರವಸೆಯನ್ನು ಏಜೆಂಟ್‌ಗಳು ನೀಡಿದ್ದರು ಎನ್ನಲಾಗಿದೆ.
2023ರ ಡಿಸೆಂಬರ್ 26ರಂದು ಕೂಡ ಭಾರತದಿಂದ ಶಂಕಿತ ಅಕ್ರಮ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಚಾರ್ಟರ್ಡ್ ವಿಮಾನವನ್ನು ಫ್ರಾನ್ಸ್ ನ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ತಡೆಹಿಡಿದಾಗ ಇಂಥದೇ ಸನ್ನಿವೇಶ ಉಂಟಾಗಿತ್ತು. ಕಡೆಗೆ ಆ ಪ್ರಯಾಣಿಕರನ್ನು ಮುಂಬೈಗೆ ವಾಪಸ್ ಕಳುಹಿಸಲಾಗಿತ್ತು.
ಅಕ್ರಮ ವಲಸೆ ಏಜೆಂಟ್‌ಗಳು ಇಂತಹ ಕಾರ್ಯಾಚರಣೆಗಳಿಗೆ ಅನುಕೂಲವಾಗುವಂತೆ ದುಬೈ, ಉಜ್ಬೇಕಿಸ್ತಾನ್ ಮತ್ತು ಲಿಬಿಯಾದಿಂದ ಚಾರ್ಟರ್ ಫ್ಲೈಟ್‌ಗಳು ಸೇರಿದಂತೆ ವಿವಿಧ ಮಾರ್ಗಗಳನ್ನು ಬಳಸುತ್ತಾರೆ ಎಂದು ಆರೋಪಿಸಲಾಗಿದೆ.