ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವೀಸಾ ಶುಲ್ಕ ಹೆಚ್ಚಿಸಿದ ಆಸ್ಟ್ರೇಲಿಯ

Update: 2024-11-28 16:51 GMT

ಸಾಂದರ್ಭಿಕ ಚಿತ್ರ | PC : NDTV


ಹೊಸದಿಲ್ಲಿ: ಜುಲೈ 1ರಿಂದ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವೀಸಾ ಶುಲ್ಕವನ್ನು 710 ಆಸ್ಟ್ರೇಲಿಯನ್ ಡಾಲರ್ ನಿಂದ 1600 ಆಸ್ಟ್ರೇಲಿಯನ್ ಡಾಲರ್ ಗೆ ಆಸ್ಟ್ರೇಲಿಯ ಏರಿಕೆ ಮಾಡಿದೆ ಎಂದು ಗುರುವಾರ ಕೇಂದ್ರ ಸರಕಾರ ಲೋಕಸಭೆಗೆ ತಿಳಿಸಿತು.

ಆಸ್ಟ್ರೇಲಿಯ ಇತ್ತೀಚೆಗೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವೀಸಾ ಶುಲ್ಕವನ್ನು ಈ ಹಿಂದಿನ ಮೊತ್ತಕ್ಕಿಂತ ಎರಡು ಪಟ್ಟು ಏರಿಕೆ ಮಾಡಿರುವುದು ವಾಸ್ತವವೇ? ಹಾಗಾದರೆ, ವಿದ್ಯಾರ್ಥಿಗಳ ವೀಸಾ ಶುಲ್ಕವನ್ನು ಇಳಿಕೆ ಮಾಡುವಂತೆ ಭಾರತ ಸರಕಾರ ಆಸ್ಟ್ರೇಲಿಯ ಸರಕಾರವನ್ನು ಸಂಪರ್ಕಿಸಿದೆಯೆ ಎಂದು ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಮೇಲಿನಂತೆ ಲಿಖಿತ ಉತ್ತರ ನೀಡಿದರು.

“ಜುಲೈ 1ರಿಂದ ಅನ್ವಯವಾಗುವಂತೆ, ಆಸ್ಟ್ರೇಲಿಯ ಸರಕಾರ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವೀಸಾ ಶುಲ್ಕವನ್ನು 710 ಆಸ್ಟ್ರೇಲಿಯನ್ ಡಾಲರ್ ನಿಂದ 1600 ಆಸ್ಟ್ರೇಲಿಯನ್ ಡಾಲರ್ ಗೆ ಏರಿಕೆ ಮಾಡಿದೆ” ಎಂದ ಕೀರ್ತಿ ವರ್ಧನ್ ಸಿಂಗ್ ತಿಳಿಸಿದರು.

“ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಇನ್ನಿತರ ವಿಷಯಗಳೊಂದಿಗೆ ಈ ವಿಷಯವನ್ನು ಆಸ್ಟ್ರೇಲಿಯ ಸರಕಾರದ ಸಂಬಂಧಿತ ಪ್ರಾಧಿಕಾರಗಳೊಂದಿಗೆ ಚರ್ಚಿಸಲಾಗಿದೆ” ಎಂದು ಅವರು ಮಾಹಿತಿ ನೀಡಿದರು.

ಆಸ್ಟ್ರೇಲಿಯದಲ್ಲಿ ವ್ಯಾಸಂಗ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಪಾಲಿಗೆ ಈ ವೀಸಾ ಶುಲ್ಕ ಏರಿಕೆಯು ಆರ್ಥಿಕ ಸವಾಲುಗಳನ್ನು ಒಡ್ಡುವ ನಿರೀಕ್ಷೆ ಇದೆ ಎಂದೂ ಅವರು ತಿಳಿಸಿದರು. ಭಾರತ-ಆಸ್ಟ್ರೇಲಿಯ ನಡುವಿನ ಶಿಕ್ಷಣ ಸ್ವರೂಪದ ಪಾಲುದಾರಿಕೆಯು ಆರ್ಥಿಕತೆ, ಶೈಕ್ಷಣಿಕ ಹಾಗೂ ಜನರ ನಡುವಿನ ಪರಸ್ಪರ ಒಪ್ಪಂದಗಳು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ಭಾಗವಾಗಿದೆ ಎಂದು ಅವರು ಹೇಳಿದರು.

“ಆಸ್ಟ್ರೇಲಿಯದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಆಸ್ಟ್ರೇಲಿಯ ಸಕಕಾರದೊಂದಿಗೆ ಪ್ರಸ್ತಾಪಿಸುವುದನ್ನು ಹಾಗೂ ಅವುಗಳ ಪ್ರಗತಿ ಪರಿಶೀಲನೆ ನಡೆಸುವುದನ್ನು ನಮ್ಮ ಸಚಿವಾಲಯ ಮುಂದುವರಿಸಲಿದೆ” ಎಂದೂ ಅವರು ಲೋಕಸಭೆಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News