ಧಾರ್ಮಿಕ ತಾರತಮ್ಯದ ಸಮಸ್ಯೆಯನ್ನು ಅಧಿಕಾರಿಗಳು ಒಪ್ಪಿಕೊಳ್ಳುತ್ತಿಲ್ಲ : ಅರ್ಜಿದಾರರ ಪರ ವಕೀಲರು
ಹೊಸದಿಲ್ಲಿ : ಶಾಲೆಗಳಲ್ಲಿ ಧಾರ್ಮಿಕ ತಾರತಮ್ಯದ ವಿರುದ್ಧ ಮಕ್ಕಳಿಗೆ ರಕ್ಷಣೆ ನೀಡಲು ಉತ್ತರ ಪ್ರದೇಶ ಶಿಕ್ಷಣ ಹಕ್ಕು ನಿಯಮಾವಳಿ, 2022ರ ನಿಯಮ 5 ಅಸ್ತಿತ್ವದಲ್ಲಿದ್ದರೂ ಅಧಿಕಾರಿಗಳು ಸಮಸ್ಯೆಯನ್ನು ಒಪ್ಪಿಕೊಳ್ಳುತ್ತಿಲ್ಲ ಮತ್ತು ಅದನ್ನು ಪರಿಹರಿಸುತ್ತಿಲ್ಲ ಎಂದು ಹಿರಿಯ ವಕೀಲ ಶಾದಾನ್ ಫರಾಸತ್ ಅವರು ಗುರುವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯೊಂದರ ವಿಚಾರಣೆ ಸಂದರ್ಭ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು.
ಶಾಲೆಯಲ್ಲಿ ಯಾವುದೇ ಮಗು ಜಾತಿ, ವರ್ಗ, ಧಾರ್ಮಿಕ ಅಥವಾ ಲಿಂಗ ನಿಂದನೆಯನ್ನು ಎದುರಿಸುವುದಿಲ್ಲ ಎನ್ನುವುದನ್ನು ಸ್ಥಳೀಯ ಪ್ರಾಧಿಕಾರವು ಖಚಿತಪಡಿಸಿಕೊಳ್ಳುವುದನ್ನು ನಿಯಮ 5 ಕಡ್ಡಾಯಗೊಳಿಸಿದೆ.
ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಶಿಕ್ಷಕಿಯೋರ್ವರಿಂದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿ ಧಾರ್ಮಿಕ ತಾರತಮ್ಯ ಮತ್ತು ದೈಹಿಕ ಶಿಕ್ಷೆಯನ್ನು ಅನುಭವಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು 2009ರ ಶಿಕ್ಷಣ ಹಕ್ಕು ಕಾಯ್ದೆ ಅನುಷ್ಠಾನ ಕುರಿತಂತೆ ಸಾಮಾಜಿಕ ಕಾರ್ಯಕರ್ತ ತುಷಾರ ಗಾಂಧಿಯವರು ಸಲ್ಲಿಸಿರುವ ಪಿಐಎಲ್ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಭಯ ಓಕಾ ಮತ್ತು ಎ.ಜಿ.ಅಗಸ್ಟಿನ್ ಅವರ ಪೀಠವು ಕೈಗೆತ್ತಿಕೊಂಡಿತ್ತು.
ಘಟನೆಯು ಆಗಸ್ಟ್ 2023ರಲ್ಲಿ ಸಂಭವಿಸಿತ್ತು. ಶಿಕ್ಷಕಿ ತೃಪ್ತಾ ತ್ಯಾಗಿ ಏಳು ವರ್ಷದ ಮುಸ್ಲಿಮ್ ಬಾಲಕನಿಗೆ ಕಪಾಳಮೋಕ್ಷ ಮಾಡುವಂತೆ ಇತರ ವಿದ್ಯಾರ್ಥಿಗಳಿಗೆ ಸೂಚಿಸಿದ್ದನ್ನು ಮತ್ತು ಆತನ ಧರ್ಮವನ್ನು ನಿಂದಿಸಿದ್ದನ್ನು ತೋರಿಸುವ ವೀಡಿಯೊ ವೈರಲ್ ಆಗಿತ್ತು. ಈ ಘಟನೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.