“ನ್ಯಾಯಾಂಗದ ಸ್ವಾಯತ್ತತೆ, ಪಾವಿತ್ರ್ಯತೆಯನ್ನು ಕಾಪಾಡಬೇಕು”: ನಿವೃತ್ತ ನ್ಯಾಯಾಧೀಶರುಗಳಿಂದ ಸಿಜೆಐಗೆ ಪತ್ರ
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ 21 ನಿವೃತ್ತ ನ್ಯಾಯಾಧೀಶರುಗಳ ಒಂದು ಗುಂಪು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ಲೆಕ್ಕಾಚಾರಿತ ಒತ್ತಡ, ತಪ್ಪು ಮಾಹಿತಿ ಮತ್ತು ಸಾರ್ವಜನಿಕ ಟೀಕೆಗಳ ಮೂಲಕ ನ್ಯಾಯಾಂಗವನ್ನು ದುರ್ಬಲಗೊಳಿಸಲು ಮಾಡಲಾಗುತ್ತಿರುವ ಪ್ರಯತ್ನಗಳ ಬಗ್ಗೆ ತನ್ನ ಕಳವಳ ವ್ಯಕ್ತಪಡಿಸಿದೆ.
ಸಂಕುಚಿತ ರಾಜಕೀಯ ಆಸಕ್ತಿಗಳು ಮತ್ತು ವೈಯಕ್ತಿಕ ಲಾಭಗಳಿಂದ ಈ ಟೀಕಾಕಾರರು ಪ್ರೇರಿತರಾಗಿದ್ದಾರೆ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಜನರ ವಿಶ್ವಾಸ ಕಳೆದು ಹೋಗುವಂತೆ ಮಾಡುತ್ತಿದ್ದರೆ ಎಂದು ಗುಂಪು ಆರೋಪಿಸಿದೆ.
ಸಿಜೆಐಗೆ ಪತ್ರ ಬರೆದವರಲ್ಲಿ ಸುಪ್ರೀಂ ಕೋರ್ಟಿನ ನಾಲ್ಕು ನಿವೃತ್ತ ನ್ಯಾಯಾಧೀಶರುಗಳಿದ್ದು ತಾವು ಈ ಪತ್ರ ಬರೆಯಲು ಕಾರಣವಾದ ಘಟನೆಗಳನ್ನು ನಿರ್ದಿಷ್ಟಪಡಿಸಿಲ್ಲ.
ಆದರೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಕೆಲ ವಿಪಕ್ಷ ನಾಯಕರ ವಿರುದ್ಧದ ಕ್ರಮಗಳು ಆಡಳಿತ ಬಿಜೆಪಿ ಮತ್ತು ವಿಪಕ್ಷಗಳ ನಡುವೆ ಮಾತಿನ ಸಮರಕ್ಕೆ ಕಾರಣವಾಗಿರುವ ನಡುವೆ ಈ ಪತ್ರ ಬಂದಿದೆ.
ಪತ್ರ ಬರೆದವರಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ದೀಪಕ್ ವರ್ಮ, ಕೃಷ್ಣ ಮುರಾರಿ, ದಿನೇಶ್ ಮಹೇಶ್ವರಿ, ಮತ್ತು ಎಂ ಆರ್ ಶಾ ಸೇರಿದ್ದಾರೆ.
ನ್ಯಾಯಾಲಯಗಳು ಮತ್ತು ನ್ಯಾಯಾಧೀಶರ ಸಮಗ್ರತೆಯ ಮೇಲೆ ಸಂಶಯ ವ್ಯಕ್ತಪಡಿಸಿ ನ್ಯಾಯಾಂಗ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರುವ ಸ್ಪಷ್ಟ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಕ್ರಿಯೆಗಳು ನ್ಯಾಯಾಂಗದ ಪಾವಿತ್ರ್ಯಕ್ಕೆ ಅಗೌರವ ತರುವ ಜೊತೆಗೆ ನ್ಯಾಯಾಧೀಶರು ಎತ್ತಿಹಿಡಿಯುವುದಾಗಿ ಪ್ರತಿಜ್ಞೆ ಮಾಡಿರುವ ನಿಷ್ಪಕ್ಷಪಾತ ಮತ್ತು ನ್ಯಾಯಯುತ ತತ್ವಗಳಿಗೆ ನೇರ ಸವಾಲೊಡ್ಡುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದ್ದು, ಸುಪ್ರೀಂ ಕೋರ್ಟ್ ಈ ಒತ್ತಡಗಳನ್ನು ಮೆಟ್ಟಿ ನಿಲ್ಲಬೇಕು ಮತ್ತು ನ್ಯಾಯಾಂಗ ವ್ಯವಸ್ಥೆಯ ಪಾವಿತ್ರ್ಯತೆ ಮತ್ತು ಸ್ವಾಯತ್ತತೆಯನ್ನು ಕಾಪಾಡಬೇಕು ಎಂದು ಆಗ್ರಹಿಸಲಾಗಿದೆ.