ಬಾಬಾ ಸಿದ್ದಿಕಿ ಕೊಲೆ ಪ್ರಕರಣ | ಮುಂಬೈ ಪೋಲಿಸರೇಕೆ ಲಾರೆನ್ಸ್ ಬಿಷ್ಣೋಯಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿಲ್ಲ?
ಮುಂಬೈ : ಕಳೆದ ವರ್ಷ ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಹತ್ಯೆಯನ್ನು ಬಿಷ್ಣೋಯಿ ಗ್ಯಾಂಗ್ ನಡೆಸಿದೆ ಎಂದು ಮುಂಬೈ ಪೋಲಿಸರು ಹೇಳಿಕೊಂಡಿದ್ದರೂ, ಗ್ಯಾಂಗ್‌ನ ನಾಯಕ ಲಾರೆನ್ಸ್ ಬಿಷ್ಣೋಯಿಯನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಹೆಸರಿಸಿಲ್ಲ.
ಎ.14,2024ರಂದು ನಟ ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡಿನ ದಾಳಿ ಪ್ರಕರಣದಲ್ಲಿ ಬಿಷ್ಣೋಯಿಯನ್ನು ಆರೋಪಿಯೆಂದು ಹೆಸರಿಸಲಾಗಿದ್ದರೆ, ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಆತನನ್ನು ಆರೋಪಿಯನ್ನಾಗಿಸಲು ಯಾವುದೇ ಪುರಾವೆ ತಮಗೆ ಲಭಿಸಿಲ್ಲ ಎಂದು ಪೋಲಿಸರು ಹೇಳಿದ್ದಾರೆ.
ಸಲ್ಮಾನ್ ನಿವಾಸದ ಹೊರಗೆ ಗುಂಡಿನ ದಾಳಿ ಪ್ರಕರಣದಲ್ಲಿ ಆರೋಪಿಯೋರ್ವನ ಹೇಳಿಕೆಯನ್ನು ತಾವು ಪಡೆದುಕೊಂಡಿದ್ದು, ಬಿಷ್ಣೋಯಿ ಸಾಬರಮತಿ ಜೈಲಿನಿಂದ ದೂರವಾಣಿಯಲ್ಲಿ ಕೆಲವು ಆರೋಪಿಗಳೊಂದಿಗೆ ನೇರವಾಗಿ ಮಾತನಾಡಿದ್ದ ಎನ್ನುವುದನ್ನು ಅದು ದೃಢಪಡಿಸಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
‘ಸಿದ್ದಿಕಿ ಪ್ರಕರಣದಲ್ಲಿ ಬಿಷ್ಣೋಯಿಯ ಕಿರಿಯ ಸೋದರ ಅನ್ಮೋಲ್ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದ ಮತ್ತು ಬಿಷ್ಣೋಯಿಯ ಯಾವುದೇ ಸಂಪರ್ಕ ನಮಗೆ ಕಂಡು ಬಂದಿಲ್ಲ. ಹೀಗಾಗಿ ಬಿಷ್ಣೋಯಿ ಗ್ಯಾಂಗ್ ಹತ್ಯೆ ನಡೆಸಿದ್ದರೂ ಆತನನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ನಾವು ಹೆಸರಿಸಿಲ್ಲ’ ಎಂದು ಅವರು ಹೇಳಿದರು.
ಬಿಷ್ಣೋಯಿಯ ಸುರಕ್ಷತೆಗಾಗಿ ಆತನನ್ನು ಜೈಲಿನಲ್ಲಿಯೇ ಇರಿಸಬೇಕೆಂದು ಎನ್‌ಐಎ ಬಯಸಿದೆ. ಹೀಗಾಗಿ ಸಾಬರಮತಿ ಜೈಲಿನಲ್ಲಿರುವ ಆತನ್ನು ಕಸ್ಟಡಿಗೆ ಪಡೆದುಕೊಳ್ಳಲು ಮುಂಬೈ ಪೋಲಿಸರಿಗೆ ಸಾಧ್ಯವಾಗಿಲ್ಲ. ಎನ್‌ಐಎ ಈ ಹಿಂದೆ ಮಾದಕದ್ರವ್ಯ ಪ್ರಕರಣದಲ್ಲಿ ಬಿಷ್ಣೋಯಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು.
ಕಳೆದ ವರ್ಷದ ನವಂಬರ್ ನಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿ ಪ್ರಯಾಣಿಸಲು ಯತ್ನಿಸುತ್ತಿದ್ದಾಗ ಅಮೆರಿಕದ ಇಮಿಗ್ರೇಷನ್ ಆ್ಯಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್‌ನಿಂದ ಬಂಧಿಸಲ್ಪಟ್ಟಿದ್ದ ಅನ್ಮೋಲ್ ಪ್ರಸ್ತುತ ಅಯೊವಾ ಜೈಲಿನಲ್ಲಿದ್ದಾನೆ.
ಸಿದ್ದಿಕಿಯವರನ್ನು ಅ.12,2024ರಂದು ಮುಂಬೈನ ಬಾಂದ್ರಾ(ಪೂರ್ವ)ದಲ್ಲಿಯ ಅವರ ಪುತ್ರ ಝೀಶನ್ ಅಖ್ತರ್ ಕಚೇರಿಯ ಹೊರಗೆ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಪ್ರಮುಖ ಶೂಟರ್ ಸೇರಿದಂತೆ 26 ಜನರನ್ನು ಪೋಲಿಸರು ಬಂಧಿಸಿದ್ದಾರೆ.