ಬಿಹಾರ | ಕೆಟ್ಟ ಸಮಯ; ಉದ್ಘಾಟನೆಯಾಗುತ್ತಿದ್ದಂತೆ ಸಮಯ ತೋರಿಸುವುದನ್ನೇ ನಿಲ್ಲಿಸಿದ ಗಡಿಯಾರ ಗೋಪುರ?

Update: 2025-04-08 18:33 IST
ಬಿಹಾರ | ಕೆಟ್ಟ ಸಮಯ; ಉದ್ಘಾಟನೆಯಾಗುತ್ತಿದ್ದಂತೆ ಸಮಯ ತೋರಿಸುವುದನ್ನೇ ನಿಲ್ಲಿಸಿದ ಗಡಿಯಾರ ಗೋಪುರ?

PC : indianexpress.com

  • whatsapp icon

ಪಟ್ನಾ: ಬಿಹಾರದ ಬಿಹಾರ್ ಶರೀಫ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಸ್ಮಾರ್ಟ್ ಸಿಟಿಯಲ್ಲಿ ನಿರ್ಮಿಸಲಾಗಿರುವ ಗಡಿಯಾರ ಗೋಪುರವು ಉದ್ಘಾಟನೆಗೊಂಡ ಬೆನ್ನಿಗೇ, ಸಮಯ ತೋರಿಸುವುದನ್ನು ನಿಲ್ಲಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳು ಹರಡಿದ್ದು, ಇದಕ್ಕೆ ಕಳಪೆ ಕಾಮಗಾರಿ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ‌

ಆದರೆ, "ಈ ಯೋಜನೆ ಇನ್ನೂ ಅಪೂರ್ಣವಾಗಿದ್ದು, ಹಾಲಿ ಗೋಪುರವೇ ಅಂತಿಮ ವಿನ್ಯಾಸವಲ್ಲ" ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ.

ಉದ್ಘಾಟನೆಗೊಂಡ ಕೇವಲ 24 ಗಂಟೆಗಳಲ್ಲಿ ಗಡಿಯಾರ ಗೋಪುರವು ಸಮಯ ತೋರಿಸುವುದನ್ನು ನಿಲ್ಲಿಸಿದೆ ಎಂದು ಕಳೆದ ವಾರಾಂತ್ಯದಲ್ಲಿ ಆರೋಪಿಸಿದ್ದ ಸಾಮಾಜಿಕ ಮಾಧ್ಯಮ ಪೋಸ್ಟ್‌ ಗಳು, ನಿರ್ಮಾಣ ಕಾಮಗಾರಿಯ ಗುಣಮಟ್ಟದ ಕುರಿತು ಟೀಕೆಗಳನ್ನೂ ವ್ಯಕ್ತಪಡಿಸಿದ್ದವು.

ಆದರೆ, ಈ ವದಂತಿಗಳು ಸುಳ್ಳು ಎಂದು ಬಿಹಾರ್ ಶರೀಫ್‌ ನ ಮಹಾನಗರ ಪಾಲಿಕೆ ಆಯುಕ್ತ ದೀಪಕ್ ಕುಮಾರ್ ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ.

"ಯೋಜನೆಯು ಪ್ರಗತಿಯಲ್ಲಿರುವುದರಿಂದ, ಗಡಿಯಾರ ಗೋಪುರವನ್ನು ಇನ್ನೂ ಉದ್ಘಾಟಿಸಿಲ್ಲ. ಪ್ರಗತಿ ಯಾತ್ರೆಯ ವೇಳೆ ಕೆಲ ಕಾಲ ಗಡಿಯಾರಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಕೆಲ ದಿನಗಳ ನಂತರ ಕೆಲವು ಅಪರಿಚಿತ ದುಷ್ಕರ್ಮಿಗಳು ಅದರ ಕೇಬಲ್ ಕಳವು ಮಾಡಿದ್ದರಿಂದಾಗಿ, ಅದು ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ. ಅದನ್ನು ಸರಿಪಡಿಸಬೇಕಿದೆ", ಎಂದು ಅವರು ತಿಳಿಸಿದ್ದಾರೆ.

"ಗಡಿಯಾರ ಗೋಪುರದ ನಿರ್ಮಾಣ ಕೂಡಾ ಅಪೂರ್ಣವಾಗಿದೆ. ಇದೇ ಅಂತಿಮ ವಿನ್ಯಾಸವಲ್ಲ" ಎಂದು ಸ್ಪಷ್ಟಪಡಿಸಿರುವ ಅವರು, ಗಡಿಯಾರ ಗೋಪುರದ ಸಂಭಾವ್ಯ ವಿನ್ಯಾಸವನ್ನು The Indian Express ಸುದ್ದಿ ಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾರೆ. "ಈ ಗೋಪುರವನ್ನು 20 ಲಕ್ಣ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆಯೇ ಹೊರತು, ಕೆಲವರು ಹರಡುತ್ತಿರುವ ವದಂತಿಯಂತೆ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿಲ್ಲ" ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News