ಅದಾನಿ ಬಂದರು ಯೋಜನೆ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಬ್ಯಾಂಕ್‌ ಖಾತೆಗಳು ಸ್ಥಗಿತ : ಕೇರಳ ಲ್ಯಾಟಿನ್‌ ಕ್ಯಾಥೊಲಿಕ್‌ ಚರ್ಚ್‌ ಆರೋಪ

Update: 2024-04-24 09:51 GMT

ಸಾಂದರ್ಭಿಕ ಚಿತ್ರ

ತಿರುವನಂತಪುರಂ: ವಿಝಿನ್ಜಂ ಎಂಬಲ್ಲಿ ಮೀನುಗಾರರು ಅದಾನಿ ಬಂದರು ಯೋಜನೆಯ ವಿರುದ್ಧ ಪ್ರತಿಭಟಿಸಿದ ನಂತರ ತನ್ನ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೇರಳದ ತಿರುವನಂತಪುರಂನ ಲ್ಯಾಟಿನ್‌ ಕ್ಯಾಥೊಲಿಕ್‌ ಚರ್ಚಿನ ಆರ್ಚ್‌ಡಯೋಸೀಸ್‌ ಹೇಳಿದೆ.

ಲ್ಯಾಟಿನ್‌ ಕ್ಯಾಥೊಲಿಕ್‌ ಡಯೋಸೀಸ್‌ ಆಫ್‌ ತಿರುವನಂತಪುರಂ ಆಶ್ರಯದಲ್ಲಿ 2022 ರಲ್ಲಿ ಮೀನುಗಾರರ ಒಂದು ಗುಂಪು ಗೌತಮ್‌ ಅದಾನಿ ಅವರ ರೂ 7500 ಕೋಟಿ ಮೊತ್ತದ ಬಂದರು ಯೋಜನೆಯ ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು. ಇದು ಕರಾವಳಿ ತೀರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರ ಜೊತೆಗೆ ತಮ್ಮ ಜೀವನೋಪಾಯವನ್ನೂ ಬಾಧಿಸುವುದು ಎಂದು ಮೀನುಗಾರರು ದೂರಿದ್ದರು.

ಯೋಜನಾ ಸ್ಥಳದಲ್ಲಿ ಕೆಲಸ ಆರಂಭಿಸಲು ಸಂಸ್ಥೆಗೆ ಪ್ರತಿಭಟನಾಕಾರರು ತಡೆಯೊಡ್ಡಿದಾಗ ನವೆಂಬರ್‌ 26, 2022ರಂದು ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ತಿರುಗಿತ್ತು. ನಂತರ ಕೇರಳ ಹೈಕೋರ್ಟ್‌ ನಿರ್ದೇಶಾನುಸಾರ ಕಾಮಗಾರಿ ಪುನರಾರಂಭಗೊಂಡಿತ್ತು.

ರವಿವಾರ ಆರ್ಚ್‌ಬಿಷಪ್‌ ಥಾಮಸ್‌ ಜೆ ನೆಟ್ಟೋ ಅವರು ಎಲ್ಲಾ ಚರ್ಚ್‌ಗಳಲ್ಲಿ ಓದಲಾದ ಪ್ಯಾಸ್ಟೋರಲ್‌ ಪತ್ರದಲ್ಲಿ, ಬಂದರು ಯೋಜನೆ ವಿರುದ್ಧದ ಪ್ರತಿಭಟನೆಗಳ ನಂತರ ಬ್ಯಾಂಕ್‌ ಖಾತೆಗಳನ್ನು ಫ್ರೀಝ್‌ ಮಾಡಿದ ಕಾರಣ ತಮ್ಮ ಸಂಸ್ಥೆಯು ತನ್ನ ದೈನಂದಿನ ಖರ್ಚುಗಳನ್ನು ಹಾಗೂ ಸೆಮಿನರೇಯಿನ್‌ಗಳ ತರಬೇತಿ ವೆಚ್ಚಗಳನ್ನು ನಿಭಾಯಿಸಲು ಕಷ್ಟಪಡುತ್ತಿದೆ, ಪರಿಸ್ಥಿತಿ ಬದಲಾಗಿಲ್ಲ, ಜನರೇ ಡಯೋಸೀಸ್‌ಗೆ ಸಹಾಯ ಒದಗಿಸಬೇಕು ಎಂದು ಪತ್ರ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News