ಸೈಬರ್ ವಂಚನೆಗೆ ಅಂಕುಶ: ಅಕ್ರಮ ವಹಿವಾಟು ಪ್ರಕರಣಗಳಲ್ಲಿ ಖಾತೆ ಮುಟ್ಟುಗೋಲು ಅಧಿಕಾರಕ್ಕೆ ಬ್ಯಾಂಕ್ ಗಳ ಮನವಿ

Update: 2025-04-13 19:38 IST
ಸೈಬರ್ ವಂಚನೆಗೆ ಅಂಕುಶ: ಅಕ್ರಮ ವಹಿವಾಟು ಪ್ರಕರಣಗಳಲ್ಲಿ ಖಾತೆ ಮುಟ್ಟುಗೋಲು ಅಧಿಕಾರಕ್ಕೆ ಬ್ಯಾಂಕ್ ಗಳ ಮನವಿ

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಹೊಸದಿಲ್ಲಿ: ನಿಷ್ಕ್ರಿಯ ಖಾತೆಗಳ ಮೂಲಕ ನಡೆಯುವ ಸೈಬರ್ ವಂಚನೆಯ ನಿಯಂತ್ರಣಕ್ಕಾಗಿ ಪ್ರಾಧಿಕಾರಗಳಿಂದ ಪೂರ್ವಾನುಮತಿಗಾಗಿ ಕಾಯುತ್ತಾ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವುದನ್ನು ತಪ್ಪಿಸಲು, ಅಕ್ರಮ ವಹಿವಾಟುಗಳಲ್ಲಿ ಭಾಗಿಯಾಗಿರುವ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ನೀಡಬೇಕು ಎಂದು ಬ್ಯಾಂಕ್ ಗಳು ಮನವಿ ಮಾಡಿವೆ.

ಆಂತರಿಕ ಅಪಾಯದ ಮುನ್ಸೂಚನೆಗಳನ್ನು ಆಧರಿಸಿ ಬ್ಯಾಂಕ್ ಗಳು ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಅಥವಾ ಅವನ್ನು ನಿರ್ಬಂಧಿಸಬಹುದಾಗಿದೆ. ಆದರೆ, ಅಕ್ರಮ ಹಣ ವರ್ಗಾವಣೆ ಕಾಯ್ದೆ (PMLA) ಅನ್ವಯ, ಯಾವುದೇ ಗ್ರಾಹಕರ ಖಾತೆಯನ್ನು ನ್ಯಾಯಾಲಯಗಳು ಅಥವಾ ಕಾನೂನು ಜಾರಿ ಪ್ರಾಧಿಕಾರಗಳ ಪೂರ್ವಾನುಮತಿ ಇಲ್ಲದೆ ಮುಟ್ಟುಗೋಲು ಹಾಕಿಕೊಳ್ಳುವ ಅಥವಾ ನಿರ್ಬಂಧಿಸುವ ಅಧಿಕಾರ ಬ್ಯಾಂಕ್ ಗಳಿಗಿಲ್ಲ.

“ಈ ಹಿನ್ನೆಲೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ನ ಪರಿಗಣನೆಗಾಗಿ ನಾವು ಈ ಸಲಹೆಯನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ” ಎಂದು ಭಾರತೀಯ ಬ್ಯಾಂಕ್ ಗಳ ಒಕ್ಕೂಟ ರಚಿಸಿದ್ದ ಕಾರ್ಯಕಾರಿ ಗುಂಪು ತನ್ನ ವರದಿಯಲ್ಲಿ ಹೇಳಿದೆ.

ವಂಚಕರು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಅಕ್ರಮ ನಿಧಿಯನ್ನು ವರ್ಗಾಯಿಸಲು ನಿಷ್ಕ್ರಿಯ ಖಾತೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಬ್ಯಾಂಕ್ ಗಳು ಇಂತಹ ಸಾವಿರಾರು ಖಾತೆಗಳನ್ನು ಪ್ರತಿ ವರ್ಷ ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದರೂ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ದುರುಪಯೋಗಪಡಿಸಿಕೊಂಡು ವಂಚಕರು ಶೀಘ್ರದಲ್ಲೇ ಹೊಸ ಖಾತೆಗಳನ್ನು ಸೃಷ್ಟಿಸುತ್ತಿದ್ದಾರೆ.

ಇದಲ್ಲದೆ, ಅಕ್ರಮ ಹಣವನ್ನು ವರ್ಗಾಯಿಸಲು ನಿಷ್ಕ್ರಿಯ ಖಾತೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಸುಲಭವಾಗಿರುವುದರಿಂದ, ಇಂತಹ ತೀರಾ ದುರ್ಬಲ ಖಾತೆಗಳ ಪರಿಶೀಲನೆ ನಡೆಸುವುದನ್ನು ಹಾಗೂ ನಿರ್ಬಂಧ ವಿಧಿಸುವುದನ್ನು ಬ್ಯಾಂಕ್ ಗಳು ಪರಿಗಣಿಸಬಹುದಾಗಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಮತದಾರರ ಗುರುತಿನ ಚೀಟಿ ಬಳಸಿಕೊಂಡು, ಪ್ಯಾನ್ ಸಂಖ್ಯೆಯ ಬದಲು ಫಾರಂ 60 ಅನ್ನು ಬಳಸಿಕೊಂಡು ಬ್ಯಾಂಕ್ ಖಾತೆಗಳನ್ನು ತೆರೆದಿರುವ ವ್ಯಕ್ತಿಗಳ ಪೂರ್ವಾಪರ ಪರಿಶೀಲಿಸಲು ಚುನಾವಣಾ ಆಯೋಗದ ದತ್ತಾಂಶವನ್ನು ಬಳಸಿಕೊಂಡು ಅಂತಹ ಖಾತೆಗಳ ಮೇಲೆ ವಹಿವಾಟು ಸಂಖ್ಯೆಗಳ ಮಿತಿಯನ್ನು ಹೇರಬಹುದು ಎಂದೂ ಬ್ಯಾಂಕ್ ಗಳು ಪ್ರಸ್ತಾವ ಮಂಡಿಸಿವೆ.

ನಿಷ್ಕ್ರಿಯ ಖಾತೆಗಳ ವಿರುದ್ಧ ಹೋರಾಡಲು ಕ್ರಿಯಾಶೀಲ, ತಂತ್ರಜ್ಞಾನ ಆಧಾರಿತ ಧೋರಣೆಯ ಅಗತ್ಯವಿದೆ. ವಹಿವಾಟು ನಿಗಾ ವ್ಯವಸ್ಥೆಯೊಂದಿಗೆ ಕೃತಕ ಬುದ್ಧಿಮತ್ತೆ ಹಾಗೂ ಯಂತ್ರ ಕಲಿಕೆಯನ್ನು ಸಂಯೋಜಿಸುವ ಮೂಲಕ, ಬ್ಯಾಂಕ್ ಗಳು ಹಾಲಿ ಲೋಪದೋಷಗಳನ್ನು ಬಗೆಹರಿಸಬಹುದಾಗಿದೆ, ಅಪರಾಧ ವ್ಯೂಹತಂತ್ರಗಳನ್ನು ಅಂದಾಜಿಸಬಹುದಾಗಿದೆ ಹಾಗೂ ಹಣಕಾಸು ಪರಿಸರದ ಸಮಗ್ರತೆಯನ್ನು ರಕ್ಷಿಸಬಹುದಾಗಿದೆ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ಮತ್ತಷ್ಟು ಸುರಕ್ಷಿತ ಹಣಕಾಸು ವಾತಾವರಣವನ್ನು ನಿರ್ಮಿಸಲು ತಂತ್ರಜ್ಞಾನದಲ್ಲಿನ ಹೂಡಿಕೆ, ಸಿಬ್ಬಂದಿ ತರಬೇತಿ ಹಾಗೂ ಪಾಲುದಾರರೊಂದಿಗಿನ ಸಹಯೋಗವನ್ನು ಒಳಗೊಂಡಿರುವ ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದೂ ವರದಿಯಲ್ಲಿ ಸಲಹೆ ನೀಡಲಾಗಿದೆ.

ನಿಷ್ಕ್ರಿಯ ಖಾತೆಗಳ ಚಟುವಟಿಕೆಗಳನ್ನು ನಿಗ್ರಹಿಸಲು ನೀಲನಕ್ಷೆಯನ್ನು ಮಂಡಿಸಿರುವ ವರದಿಯು, ಈ ಕ್ರಮಗಳನ್ನು ಜಾರಿಗೊಳಿಸಲು ಹಣಕಾಸು ಸಂಸ್ಥೆಗಳು, ನಿಯಂತ್ರಕರು, ಕಾನೂನು ಜಾರಿ ಪ್ರಾಧಿಕಾರಗಳು ಹಾಗೂ ತಂತ್ರಜ್ಞಾನ ಪೂರೈಕೆದಾರರ ಅರ್ಪಣಾ ಮನೋಭಾವ ಹಾಗೂ ಸಹಕಾರದ ಅಗತ್ಯವಿದೆ ಎಂದೂ ಹೇಳಿದೆ.

ಒಟ್ಟಾರೆಯಾಗಿ, ಈ ಪ್ರಸ್ತಾವಿತ ಕ್ರಮಗಳಿಂದ ಮುಂಬರುವ ಅಪಾಯಗಳು ಹಾಗೂ ನಿಷ್ಕ್ರಿಯ ಖಾತೆಗಳ ಹಾವಳಿಯಿಂದ ಹಣಕಾಸು ವ್ಯವಸ್ಥೆಯನ್ನು ಬ್ಯಾಂಕ್ ಗಳು ರಕ್ಷಿಸಬಹುದಾಗಿದೆ ಎಂದು ಈ ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News