"ಇದಕ್ಕಿಂತ ಮಾನಸಿಕ ಆಸ್ಪತ್ರೆಗೆ ದಾಖಲಾಗುವುದೇ ಉತ್ತಮ": ಬಿಗ್ ಬಾಸ್ ಆಮಂತ್ರಣದ ಸ್ಕ್ರೀನ್ ಶಾಟ್ ಹಂಚಿಕೊಂಡು ವ್ಯಂಗ್ಯವಾಡಿದ ಕುನಾಲ್ ಕಾಮ್ರಾ

ಕುನಾಲ್ ಕಾಮ್ರಾ | PC : X \ @kunalkamra88
ಹೊಸದಿಲ್ಲಿ: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಋತುವಿನಲ್ಲಿ ಭಾಗವಹಿಸುವಂತೆ ತಮಗೆ ಆಮಂತ್ರಣ ಬಂದಿದ್ದು, ಅದನ್ನು ನಾನು ತಿರಸ್ಕರಿಸಿದ್ದೇನೆ ಎಂದು ಕಾಮಿಡಿಯನ್ ಕುನಾಲ್ ಕಾಮ್ರಾ ಹೇಳಿದ್ದಾರೆ.
ತನ್ನನ್ನು ತಾನು ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳಲಿರುವ ಸ್ಪರ್ಧಿಗಳ ಆಯ್ಕೆಯನ್ನು ನಿರ್ವಹಿಸುತ್ತಿರುವ ವ್ಯಕ್ತಿ ಎಂದು ಹೇಳಿಕೊಂಡಿರುವವರೊಬ್ಬರೊಂದಿಗೆ ತಾನು ನಡೆಸಿರುವ ವಾಟ್ಸ್ ಆ್ಯಪ್ ಚಾಟ್ ನ ಸ್ಕ್ರೀನ್ ಶಾಟ್ ಅನ್ನು ಮಂಗಳವಾರ ಕುನಾಲ್ ಕಾಮ್ರಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಕುನಾಲ್ ಕಾಮ್ರಾ ಹಂಚಿಕೊಂಡಿರುವ ಸ್ಕ್ರೀನ್ ಶಾಟ್ ಪ್ರಕಾರ, ಚರ್ಚೆಯ ವೇಳೆ ನಮಗೆ ನಿಮ್ಮ ಹೆಸರು ಕುತೂಹಲಕಾರಿಯಾಗಿ ಕಂಡು ಬಂದಿತು ಎಂದು ಬಿಗ್ ಬಾಸ್ ಸ್ಪರ್ಧಿಗಳ ಆಯ್ಕೆಯನ್ನು ನಿರ್ವಹಿಸುವ ವ್ಯಕ್ತಿಯೆಂದು ಹೇಳಿಕೊಂಡಿರುವವರೊಬ್ಬರು ಹೇಳಿರುವುದು ಕಂಡು ಬಂದಿದೆ.
“ಇದು ನಿಮ್ಮ ಗಮನದಲ್ಲಿರಲಾರದು ಎಂದು ನನಗೆ ತಿಳಿದಿದೆ. ಆದರೆ, ನಿಮ್ಮ ನೈಜ ಭಾವನೆಗಳನ್ನು ವ್ಯಕ್ತಪಡಿಸಿ, ಭಾರಿ ಪ್ರಮಾಣದ ಪ್ರೇಕ್ಷಕರನ್ನು ಗೆಲ್ಲಲು ಇದು ಒಂದು ಹುಚ್ಚು ವೇದಿಕೆಯಾಗಿದೆ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆಯಾಗಿದೆ. ನಿಮಗೇನನ್ನಿಸುತ್ತದೆ? ನಾವಿದರ ಕುರಿತು ಮಾತನಾಡಬಹುದೆ?” ಎಂದು ಆ ವ್ಯಕ್ತಿ ವಾಟ್ಸ್ ಆ್ಯಪ್ ಚಾಟ್ ನಲ್ಲಿ ಕುನಾಲ್ ಕಾಮ್ರಾರನ್ನು ಪ್ರಶ್ನಿಸಿದ್ದಾರೆ.
ಅವರ ಪ್ರಶ್ನೆಗೆ, “ಇದಕ್ಕಿಂತ ಮಾನಸಿಕ ಆಸ್ಪತ್ರೆಗೆ ದಾಖಲಾಗುವುದೇ ಉತ್ತಮ” ಎಂದು ಕುನಾಲ್ ಕಾಮ್ರಾ ಪ್ರತ್ಯುತ್ತರ ನೀಡಿದ್ದಾರೆ.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಕುರಿತು ಮಾಡಿದ ವ್ಯಂಗ್ಯಕ್ಕಾಗಿ ಹಲವು ಎಫ್ಐಆರ್ ಗಳನ್ನು ಎದುರಿಸುತ್ತಿರುವ ಕುನಾಲ್ ಕಾಮ್ರಾರನ್ನು ಬಿಗ್ ಬಾಸ್ 19ನೇ ಋತುವಿಗೆ ಆಮಂತ್ರಿಸಲಾಗಿದೆಯೊ ಅಥವಾ ಒಟಿಟಿ ಆವೃತ್ತಿಯ ನಾಲ್ಕನೆ ಋತುವಿಗೆ ಆಮಂತ್ರಿಸಲಾಗಿದೆಯೊ ಎಂಬುದಿನ್ನೂ ಸ್ಪಷ್ಟವಾಗಿಲ್ಲ.
ಇದಕ್ಕೂ ಮುನ್ನ, ಒಟಿಟಿ ಆವೃತ್ತಿಯ ಬಿಗ್ ಬಾಸ್ ಎರಡನೆ ಋತುವಿನಲ್ಲಿ ಭಾಗವಹಿಸುವ ಸಂಬಂಧ ಕುನಾಲ್ ಕಾಮ್ರಾರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು 2023ರಲ್ಲಿ ವರದಿಯಾಗಿತ್ತು.