ಭೀಮಾ ಕೋರೆಗಾಂವ್ ಆರೋಪಿ ಜ್ಯೋತಿ ಜಗತಾಪ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

Update: 2024-08-22 15:28 GMT

ಸುಪ್ರೀಂ ಕೋರ್ಟ್ | PC : PTI

ಹೊಸದಿಲ್ಲಿ : ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳ ಪೈಕಿ ಒಬ್ಬರಾಗಿರುವ ಜ್ಯೋತಿ ಜಗತಾಪ್‌ರ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಮುಂದೂಡಿದೆ. ಪ್ರಕರಣದ ಇನ್ನೋರ್ವ ಆರೋಪಿ ಮಹೇಶ್ ರಾವುತ್‌ರ ಬಾಕಿಯಿರುವ ಜಾಮೀನು ಅರ್ಜಿಯ ಜೊತೆಗೆ ಈ ಜಾಮೀನು ಅರ್ಜಿಯ ವಿಚಾರಣೆಯನ್ನೂ ಮಾಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಾಡಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಈ ಕ್ರಮ ತೆಗೆದುಕೊಂಡಿದೆ.

2018 ಜನವರಿ 1ರಂದು ನಡೆದ ಭೀಮಾ ಕೋರೆಗಾಂವ್ ಗಲಭೆಯ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ. ಆ ಗಲಭೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಪುಣೆಯಲ್ಲಿರುವ ಕೋರೆಗಾಂವ್- ಭೀಮಾ ಯುದ್ಧ ಸ್ಮಾರಕದ ಬಳಿ ನಡೆದ ಸಭೆಯೊಂದರಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಲಾಗಿದೆ ಹಾಗೂ ಅದರಿಂದಾಗಿ ಹಿಂಸೆ ಸ್ಫೋಟಿಸಿದೆ ಎಂಬುದಾಗಿ ಎನ್‌ಐಎ ಆರೋಪಿಸಿದೆ.

ಜ್ಯೋತಿ ಜಗತಾಪ್‌ರ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿದ ಅವರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು.

ಈ ಎರಡೂ ಪ್ರಕರಣಗಳನ್ನು ಜೊತೆಯಾಗಿ ವಿಚಾರಣೆಗೆ ನಿಗದಿಪಡಿಸಲು ಮುಖ್ಯ ನ್ಯಾಯಾಧೀಶರ ಸೂಚನೆಗಳನ್ನು ಪಡೆದುಕೊಳ್ಳುವಂತೆ ನ್ಯಾಯಮೂರ್ತಿಗಳಾದ ಎಮ್.ಎಮ್. ಸುಂದರೇಶ್ ಮತ್ತು ಅರವಿಂದ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಗೆ ಸೂಚಿಸಿತು.

ರಾವುತರಿಗೆ ನೀಡಲಾಗಿರುವ ಜಾಮೀನನ್ನು ಪ್ರಶ್ನಿಸಿ ಎನ್‌ಐಎ ಸಲ್ಲಿಸಿರುವ ಮೇಲ್ಮನವಿಯು ಇನ್ನೊಂದು ಪೀಠದ ಮುಂದೆ ಬಾಕಿಯಿದೆ ಮತ್ತು ಆ ಅರ್ಜಿಯ ವಿಚಾರಣೆಯನ್ನು ಕೊನೆಯ ಬಾರಿಗೆ ಜನವರಿಯಲ್ಲಿ ನ್ಯಾ. ಬೇಲಾ ಎಮ್. ತ್ರಿವೇದಿ ನೇತೃತ್ವದ ಪೀಠ ನಡೆಸಿತ್ತು ಎಂಬುದಾಗಿ ಎನ್‌ಐಎ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದಿರು.

ರಾವುತ್‌ರಿಗೆ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಜಾಮೀನು ನೀಡಲಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಕಾಲ ಕಾಲಕ್ಕೆ ತಡೆಯನ್ನು ವಿಸ್ತರಿಸಿದ ಹಿನ್ನೆಲೆಯಲ್ಲಿ ಅವರು ಈಗಲೂ ಜೈಲಿನಲ್ಲೇ ಇದ್ದಾರೆ.

ಜ್ಯೋತಿ ಜಗತಾಪ್‌ರ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠವು, ‘‘ಸಮಾನ ಆದೇಶವೊಂದು ಇರಬೇಕು. ಬಳಿಕ ನಾವು ಪ್ರಕರಣದ ವಿಚಾರಣೆ ನಡೆಸುತ್ತೇವೆ. ಜಾಮೀನು ಕೊಡುವುದೋ ಇಲ್ಲವೋ ಎನ್ನುವುದನ್ನು ನಾವು ನಿರ್ಧರಿಸಬೇಕಾಗಿದೆ. ಆದರೆ, ನಾವು ಮಧ್ಯಂತರ ಜಾಮೀನು ನೀಡುವುದಿಲ್ಲ’’ ಎಂದು ಪೀಠ ಹೇಳಿತು.

ಜ್ಯೋತಿ ಜಗತಾಪ್ ಪರವಾಗಿ ವಾದಿಸಿದ ಹಿರಿಯ ವಕೀಲರಾದ ಮಿಹಿರ್ ದೇಸಾಯಿ ಮತ್ತು ಅಪರ್ಣಾ ಭಟ್, ಪ್ರಕರಣಕ್ಕೆ ಸಂಬಂಧಿಸಿ 16 ಮಂದಿಯನ್ನು ಬಂಧಿಸಲಾಗಿತ್ತು ಎಂದು ಹೇಳಿದರು. ಆ ಪೈಕಿ ಓರ್ವ ಆರೋಪಿ ಮೃತಪಟ್ಟರೆ, ಏಳು ಮಂದಿಗೆ ಜಾಮೀನು ನೀಡಲಾಗಿದೆ. ಉಳಿದವರು ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದಾರೆ ಹಾಗೂ ಅವುಗಳ ಪೈಕಿ ಕೆಲವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿಯಿವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News