ಬಿಹಾರ: ಮದ್ಯ ನಿಷೇಧ ಕಾಯ್ದೆಯಡಿ ವ್ಯಕ್ತಿಯ ಬಂಧನ; ಉದ್ರಿಕ್ತರಿಂದ ಪೊಲೀಸ್ ಠಾಣೆ ಮೇಲೆ ದಾಳಿ

ಸಾಂದರ್ಭಿಕ ಚಿತ್ರ (PTI)
ಕಟಿಹಾರ್ (ಬಿಹಾರ): ಬಿಹಾರ ಮದ್ಯ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿಯೋರ್ವನನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ, ಶುಕ್ರವಾರ ಪೊಲೀಸ್ ಠಾಣೆಯೊಂದರ ಮೇಲೆ ದಾಳಿ ನಡೆಸಿರುವ ಉದ್ರಿಕ್ತರ ಗುಂಪೊಂದು, ಐವರು ಪೊಲೀಸರನ್ನು ಗಾಯಗೊಳಿಸಿರುವ ಘಟನೆ ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ ನಡೆದಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಿಹಾರ ನಿಷೇಧ ಮತ್ತು ಅಬಕಾರಿ ಕಾಯ್ದೆಯಡಿ, ಎಪ್ರಿಲ್ 2016ರಿಂದ ಬಿಹಾರದಲ್ಲಿ ಮದ್ಯ ಸೇವನೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಟಿಹಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಶರ್ಮ, “ಮದ್ಯ ನಿಷೇಧ ಕಾಯ್ದೆಯಡಿ ಬಂಧಿತನಾಗಿದ್ದ ವ್ಯಕ್ತಿಯನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಉದ್ರಿಕ್ತರ ಗುಂಪೊಂದು ಶುಕ್ರವಾರ ನಡುರಾತ್ರಿ ದಂಖೋರ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದೆ” ಎಂದು ತಿಳಿಸಿದ್ದಾರೆ.
ಪೊಲೀಸ್ ಠಾಣೆಯ ಆವರಣವನ್ನು ಪ್ರವೇಶಿಸಿದ ಉದ್ರಿಕ್ತರ ಗುಂಪು, ಕರ್ತವ್ಯನಿರತರಾಗಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತು ಎಂದೂ ಅವರು ಹೇಳಿದ್ದಾರೆ.
“ಈ ಘಟನೆಯಲ್ಲಿ ಐವರು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ತಮ್ಮ ಮೇಲಿನ ದಾಳಿಗೆ ಪ್ರತಿಯಾಗಿ, ಉದ್ರಿಕ್ತರ ಗುಂಪನ್ನು ಚದುರಿಸಲು ಪೊಲೀಸ್ ಸಿಬ್ಬಂದಿಗಳು ಗುಂಡಿನ ದಾಳಿ ನಡೆಸಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
“ಹೀಗಿದ್ದೂ, ಪೊಲೀಸರ ಲಾಕಪ್ಪಿನಲ್ಲಿದ್ದ ಬಂಧಿತ ವ್ಯಕ್ತಿಯನ್ನು ಬಿಡುಗಡೆಗೊಳಿಸುವಲ್ಲಿ ಉದ್ರಿಕ್ತರ ಗುಂಪು ಯಶಸ್ವಿಯಾಗಿಲ್ಲ” ಎಂದೂ ಅವರು ಹೇಳಿದ್ದಾರೆ.
ಘಟನೆಯ ಸಂಬಂಧ ಐವರನ್ನು ಬಂಧಿಸಲಾಗಿದೆ.