ಜಾತಿ ಗಣತಿ ಹೆಸರಲ್ಲಿ ಜನರನ್ನು ಮೂರ್ಖರನ್ನಾಗಿಸಿದ ಬಿಹಾರ ಸರಕಾರ: ಪ್ರಶಾಂತ್ ಕಿಶೋರ್

Update: 2025-04-21 21:08 IST
Prashant Kishor

ಪ್ರಶಾಂತ್ ಕಿಶೋರ್| PTI 

  • whatsapp icon

ಪಾಟ್ನಾ: ಜಾತಿ ಗಣತಿ, ಭೂ ಸಮೀಕ್ಷೆ ಹಾಗೂ ದಲಿತ, ಮಹಾ ದಲಿತ ಕುಟುಂಬಗಳು ತಮ್ಮ ಮನೆ ಕಟ್ಟಿಕೊಳ್ಳಲು ತಲಾ ಮೂರು ದಶಮಾಂಶ ಭೂಮಿ ಮಂಜೂರು ಕುರಿತಂತೆ ಜನ ಸೂರಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸೋಮವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಮೀಕ್ಷಾ ವರದಿಯಲ್ಲಿ ತಿಂಗಳ ಆದಾಯ 5,000 ರೂ.ಗಿಂತ ಕಡಿಮೆ ತೋರಿಸುತ್ತಿರುವ ಸುಮಾರು 94 ಲಕ್ಷ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಣಕಾಸು ನೆರವು ನೀಡುವಲ್ಲಿ ಬಿಹಾರ ಸರಕಾರ ವಿಫಲವಾಗಿದೆ. ಈ ಮೂಲಕ ಅದು ಜಾತಿ ಗಣತಿ ಹೆಸರಿನಲ್ಲಿ ಬಿಹಾರದ ಜನರನ್ನು ಮೂರ್ಖರನ್ನಾಗಿಸಿದೆ ಎಂದು ಕಿಶೋರ್ ಸುದ್ದಿಗಾರರಿಗೆ ತಿಳಿಸಿದರು.

‘‘ಜಾತಿ ಆಧಾರಿತ ಸಮೀಕ್ಷೆ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ ಬಳಿಕ ತಿಂಗಳಿಗೆ 5,000ಕ್ಕಿಂತ ಕಡಿಮೆ ಆದಾಯ ಇರುವ 94 ಲಕ್ಷ ಕುಟುಂಬಗಳಿಗೆ ಸರಕಾರ ತಲಾ 2 ಲಕ್ಷ ರೂ. ನೀಡಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದರು. ಆದರೆ, ಮುಖ್ಯಮಂತ್ರಿ ಅವರ ಭರವಸೆ ಏನಾಯಿತು?’’ ಎಂದು ಅವರು ಪ್ರಶ್ನಿಸಿದ್ದಾರೆ.

ಇದೇ ರೀತಿ ಮನೆ ಕಟ್ಟಲು ಸ್ವಂತ ಸ್ಥಳ ಇಲ್ಲದ 39 ಲಕ್ಷ ದಲಿತ ಹಾಗೂ ಮಹಾ ದಲಿತ ಕುಟುಂಬಗಳಿಗೆ ತಲಾ ಮೂರು ದಶಮಾಂಶ ಭೂಮಿ ಮಂಜೂರು ಮಾಡಲಾಗುವುದು ಎಂದು ನಿತೀಶ್ ಕುಮಾರ್ ಭರವಸೆ ನೀಡಿದ್ದರು. ಆದರೆ, ಸರಕಾರದ ವರದಿ ಪ್ರಕಾರ ಈ ಯೋಜನೆ ಅಡಿಯಲ್ಲಿ ಇದುವರೆಗೆ ಕೇವಲ 1.20 ಲಕ್ಷ ಕುಟುಂಬಗಳಿಗೆ ಮಾತ್ರ ಸೌಲಭ್ಯ ದೊರಕಿದೆ ಎಂದು ಅವರು ತಿಳಿಸಿದ್ದಾರೆ.

ದಲಿತರು ಹಾಗೂ ಮಹಾ ದಲಿತರನ್ನು ಮೇಲೆತ್ತಲು 2006ರಲ್ಲಿ ದಲಿತ ವಿಕಾಸ್ ಮಿಷನ್ ಅನ್ನು ಆರಂಭಿಸಲಾಗಿತ್ತು. ಇದರಲ್ಲಿ ಕೇವಲ 2.34 ಲಕ್ಷ ಜನರಿಗೆ ಮಾತ್ರ ಮೂರು ದಶಮಾಂಶ ಭೂಮಿ ಮಂಜೂರು ಮಾಡಲಾಗಿದೆ. ಕೇಂದ್ರ ಸರಕಾರ ರೂಪಿಸಿದ ದೇಶ್‌ ಪಾಲ್ ಸಮಿತಿಯ ತಂಡ ಪಾಟ್ನಾಕ್ಕೆ ಭೇಟಿ ನೀಡಿತ್ತು. ಸಮಿತಿ ತನ್ನ ವರದಿಯಲ್ಲಿ 1.20 ಲಕ್ಷ ಜನರಿಗೆ ಕಾಗದದಲ್ಲಿ ಮಾತ್ರ ಭೂಮಿ ಮಂಜೂರು ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಿದೆ ಎಂದು ಅವರು ಹೇಳಿದ್ದಾರೆ.

‘‘ಈ 1.20 ಲಕ್ಷ ಕುಟುಂಬಗಳು ರಾಜ್ಯ ಸರಕಾರ ಒದಗಿಸಿದ ಭೂಮಿಯ ಮಾಲಕತ್ವವನ್ನು ಹೊಂದಿರಲಿಲ್ಲ. ತಮ್ಮ ಸ್ವಂತ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಉಳಿದ 48 ಲಕ್ಷ ಜನರಿಗೆ ಮೂರು ದಶಮಾಂಶ ಭೂಮಿಯನ್ನು ಯಾವಾಗ ನೀಡಲಾಗುವುದು ಎಂಬುದನ್ನು ಜನ ಸೂರಜ್ ಪಕ್ಷ ಈಗ ತಿಳಿಯಲು ಬಯಸುವುದಾಗಿ’’ ಅವರು ಹೇಳಿದ್ದಾರೆ.

ಬಿಹಾರದಲ್ಲಿ ಭೂ ಸಮೀಕ್ಷೆ 2013ರಲ್ಲಿ ಆರಂಭವಾಗಿದೆ. ಆದರೆ, ಇದುವರೆಗೆ ಪೂರ್ಣಗೊಂಡಿಲ್ಲ. ಇನ್ನೊಂದೆಡೆ ತೆಲಂಗಾಣ ಹಾಗೂ ಆಂಧ್ರಪ್ರದೇಶದಂತಹ ದಕ್ಷಿಣದ ರಾಜ್ಯಗಳಲ್ಲಿ ಭೂ ಸಮೀಕ್ಷೆ ಕಾರ್ಯ ಗಡುವಿನ ಒಳಗೆ ಪೂರ್ಣಗೊಂಡಿದೆ ಎಂದು ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News