'ಬಾಬಾಸಾಹೇಬರಿಗೆ ಅವಮಾನ': ಅಂಬೇಡ್ಕರ್ ಅವರ ಚಿತ್ರವನ್ನು ಎಡಿಟ್ ಮಾಡಿದ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಆಕ್ರೋಶ

Update: 2024-12-19 08:38 GMT
Photo: X/@BJP4India

ಹೊಸದಿಲ್ಲಿ: ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ʼಅವಮಾನಿಸಿದ್ದಾರೆʼ ಎಂದು ಆರೋಪಿಸಿರುವ ಪ್ರತಿಪಕ್ಷಗಳು, ಅವರನ್ನು ಸಂಪುಟದಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆಗೆ ಸಂಬಂಧಿಸಿದ ಚಿತ್ರಗಳನ್ನು ಬಿಜೆಪಿ ಎಡಿಟ್‌ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಇದು ಕೂಡಾ ವಿವಾದಕ್ಕೆ ಕಾರಣವಾಗಿದೆ.

ಅಂಬೇಡ್ಕರ್ ಅವರ ಫೋಟೋಗಳೊಂದಿಗೆ ಪ್ರತಿಭಟನೆ ನಡೆಸುತ್ತಿರುವ ಇಂಡಿಯಾ ಒಕ್ಕೂಟದ ಸಂಸದರ ಫೋಟೋವನ್ನು ಎಡಿಟ್‌ ಮಾಡಿರುವ ಬಿಜೆಪಿ, ಅಂಬೇಡ್ಕರ್‌ ರ ಚಿತ್ರವನ್ನು ಹಂಗೇರಿಯನ್-ಅಮೆರಿಕನ್ ಉದ್ಯಮಿ ಜಾರ್ಜ್ ಸೊರೊಸ್ ಅವರ ಚಿತ್ರದೊಂದಿಗೆ ಬದಲಾಯಿಸಿದೆ.

ಬಿಜೆಪಿಯ ಪೋಸ್ಟ್‌ ಹೊಸ ವಿವಾದಕ್ಕೆ ಕಾರಣವಾಗಿದ್ದು, ಕೇಸರಿ ಪಕ್ಷವು ಮತ್ತೊಮ್ಮೆ ಅಂಬೇಡ್ಕರ್ ಅವರನ್ನು ಅವಮಾನಿಸಿದೆ ಎಂದು ಕಾಂಗ್ರೆಸ್ ಹೇಳಿದೆ.

“ಅಂಬೇಡ್ಕರ್‌ ಹೆಸರನ್ನು ಹೇಳುವುದು ಈಗ ಫ್ಯಾಶನ್‌ ಆಗಿದೆ. ಅದರ ಬದಲು ದೇವರ ಹೆಸರನ್ನು ಹೇಳಿದರೆ ಏಳೇಳು ಜನ್ಮದಲ್ಲಿ ಸ್ವರ್ಗವಾದರೂ ಪ್ರಾಪ್ತಿಯಾಗುತ್ತಿತ್ತು” ಎಂದು ಅಮಿತ್‌ ಶಾ ಅವರು ರಾಜ್ಯಸಭೆಯಲ್ಲಿ ಹೇಳಿದ್ದರು.

ಬಿಜೆಪಿ ಕ್ರಮವನ್ನು ಖಂಡಿಸಿರುವ ವಯನಾಡಿನ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, "ಸದನದಲ್ಲಿ ಬಾಬಾಸಾಹೇಬರನ್ನು ಅವಮಾನಿಸಿದ ನಂತರ, ಇಂದು ಮತ್ತೆ ಬಿಜೆಪಿ ಅವರನ್ನು ಅವಮಾನಿಸಿದೆ. ಅವರು ಅಂಬೇಡ್ಕರ್ ರ ಫೋಟೋವನ್ನು ತಿರುಚಿ ಅವರ ಮೇಲೆ ಬೇರೊಬ್ಬರ ಫೋಟೋವನ್ನು ಹಾಕಿದ್ದಾರೆ. ವಿವಿಧ ಸ್ಥಳಗಳಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಹಾನಿಗೊಳಿಸುವ ಚಿಂತನೆಯೂ ಇದೇ ಆಗಿದೆ. ಇದು ಬಾಬಾಸಾಹೇಬರಿಗೂ ಮಾಡಿದ ಅವಮಾನ, ಸಂವಿಧಾನ ಶಿಲ್ಪಿಗೂ ಮಾಡಿದ ಅವಮಾನ” ಎಂದು ಆಕ್ರೋಶ ಹೊರಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News