ವಕ್ಫ್ ತಿದ್ದುಪಡಿ ವಿಧೇಯಕದ ವಿರುದ್ಧ ಬಿಜೆಪಿಯ ಮಿತ್ರಪಕ್ಷ ಜೆಡಿಯು ಅಸಮಾಧಾನ

Update: 2024-08-23 15:28 GMT

ನರೇಂದ್ರ ಮೋದಿ , ನಿತೀಶ್ ಕುಮಾರ್ | PC : NDTV 


ಹೊಸದಿಲ್ಲಿ: ವಿವಾದಾತ್ಮಕ ವಕ್ಫ್ ತಿದ್ದುಪಡಿ ವಿಧೇಯಕದ ಬಗ್ಗೆ ಕೇಂದ್ರದ ಆಡಳಿತಾರೂಢ ಬಿಜೆಪಿಯ ಪ್ರಮುಖ ಮಿತ್ರಪಕ್ಷಗಳಲ್ಲೊಂದಾದ ಜೆಡಿಯು ತೀವ್ರ ಕಳವಳ ವ್ಯಕ್ತಪಡಿಸಿದೆ.

ಮುಸ್ಲಿಮರ ಹಿತಾಸಕ್ತಿಗಳ ರಕ್ಷಣೆಗಾಗಿ ಪ್ರಸ್ತಾವಿತ ವಕ್ಫ್ ಕಾನೂನಿನಲ್ಲಿ ಬದಲಾವಣೆಗಳನ್ನು ಮಾಡಬೇಕಾದ ಅಗತ್ಯವಿದೆಯೆಂದು ಜೆಡಿಯು ಪ್ರತಿಪಾದಿಸಿದೆ. ಈ ವಿಧೇಯಕಕ್ಕೆ ಜೆಡಿಯು ಆರಂಭಿಕ ಹಂತದಲ್ಲಿ ಬೆಂಬಲ ನೀಡಿತ್ತು. ಅಲ್ಲದೆ ಆ ಪಕ್ಷದ ಸಂಸದ ರಾಜೀವ್ರಂಜನ್ ಅವರು ಲೋಕಸಭೆಯಲ್ಲಿ ವಿಧೇಯಕದ ಕುರಿತಾಗಿ ನಡೆದ ಚರ್ಚೆಯಲ್ಲಿ ವಿಧೇಯಕವನ್ನು ಬೆಂಬಲಿಸಿ ಮಾತನಾಡಿದ್ದರು.

ವಕ್ಫ್ ಇಲಾಖೆಯಲ್ಲಿ ಪರಾದರ್ಶಕತೆಯನ್ನು ತರಲು ಕಾನೂನಿಗೆ ತಿದ್ದುಪಡಿ ತರುವ ಅಗತ್ಯವಿದೆಯೆಂದು ಅವರು ಹೇಳಿದ್ದರು.

ಆವಾಗಿನಿಂದಲೂ ಜೆಡಿಯುನಲ್ಲಿ ಅಸಮಾಧಾನ ಹೊಗೆಯಾಡುತ್ತಿತ್ತು. ಬಿಹಾರ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮೊಹಮ್ಮದ್ ಝಾಮಾ ಖಾನ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ರನ್ನು ಭೇಟಿಯಾಗಿ ವಕ್ಫ್ ತಿದ್ದುಪಡಿ ವಿಧೇಯಕದಲ್ಲಿನ ಕೆಲವು ಕಾನೂನುಗಳ ಬಗ್ಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಖಾನ್ ಮಾತ್ರವಲ್ಲದೆ ಬಿಹಾರದ ಜಲಸಂಪನ್ಮೂಲ ಸಚಿವ ಹಾಗೂ ಸಿಎಂ ನಿತೀಶ್ ಕುಮಾರ್ ನಿಕಟವರ್ತಿ, ವಿಜಯ ಕುಮಾರ್ ಚೌಧುರಿ ಅವರೂ ವಿಧೇಯಕದ ಕುರಿತಾಗಿ ಮುಸ್ಲಿಂ ಸಮುದಾಯದವರ ಆತಂಕಗಳ ಬಗ್ಗೆ ಮಾತನಾಡಿದ್ದರು.

ಶಾಸಕ ಗುಲಾಮ್ ಗೌಸ್ ಸೇರಿದಂತೆ ಇತರ ಜೆಡಿಯು ನಾಯಕರು ಕೂಡಾ ವಿಧೇಯಕದ ಬಗ್ಗೆ ಸಂದೇಹಗಳನ್ನು ವ್ಯಕ್ತಪಡಿಸಿದ್ದರು.

ಜೆಡಿಯು ಕಾರ್ಯಕಾರಿ ಸಮಿತಿ ಅಧ್ಯಕ್ಷ ಸಂಜಯ್ ಝಾ ಹಾಗೂ ಮೊಹಮ್ಮದ್ ಝಾಮಾ ಖಾನ್ ಅವರು ಇತ್ತೀಚೆಗೆ ಕೇಂದ್ರ ಗೃಹ ಸಚಿವರ ಕಿರಣ್ ರಿಜಿಜು ಅವರನ್ನು ಭೇಟಿಯಾಗಿ ಪ್ರಸ್ತಾವಿತ ನೂತನ ವಿಧೇಯಕದ ಕೆಲವು ಸೆಕ್ಷನ್ಗಳ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ವಕ್ಫ್ ವಿಧೇಯಕದಲ್ಲಿ ಮಾಡಲಾಗಿರುವ ತಿದ್ದುಪಡಿಗಳನ್ನು ಕೇಂದ್ರ ಸರಕಾರ ಸಮರ್ಥಿಸಿಕೊಂಡಿದೆ.

ವಕ್ಫ್ ಮಂಡಳಿಗಳಲ್ಲಿ ಮುಸ್ಲಿಂ ಮಹಿಳೆಯರನ್ನು ಹಾಗೂ ಮುಸ್ಲಿಮೇತರರರನ್ನು ಸೇರ್ಪಡೆಗೊಳಿಸುವುದು ಸೇರಿದಂತೆ ವಕ್ಫ್ ವಿಧೇಯಕದಲ್ಲಿ ಮಾಡಲಾಗಿರುವ ಒಟ್ಟು 44 ಬದಲಾವಣೆಗಳು ಕೇಂದ್ರ ಹಾಗೂ ರಾಜ್ಯ ವಕ್ಫ ಮಂಡಳಿಗಳ ಪಾರದರ್ಶಕತೆಯನ್ನು ಕಾಪಾಡುವ ಪ್ರಯತ್ನವಾಗಿದೆ ಎಂದು ಹೇಳಿದೆ.

ವಕ್ಫ್ ಕಾಯ್ದೆಯ ಪ್ರಸ್ತಾವಿತ ತಿದ್ದುಪಡಿಗಳಿಗೆ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಬಲವಾದ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಇದೊಂದು ಕರಾಳ ಕಾನೂನಾಗಿದ್ದು, ಫೆಡರಲ್ ವ್ಯವಸ್ಥೆಯ ಮೇಲೆ ಮಾಡಲಾದ ದಾಳಿಯಾಗಿದೆ ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

ವಕ್ಫ್ ತಿದ್ದುಪಡಿ ವಿಧೇಯಕಕ್ಕೆ ಕಾಂಗ್ರೆಸ್ನ ವಿರೋಧವನ್ನು ಕಿರಣ್ ರಿಜಿಜು ಅವರು ಬಲವಾಗಿ ಟೀಕಿಸಿದ್ದಾರೆ. ಕೆಲವು ವ್ಯಕ್ತಿಗಳು ವಕ್ಫ್ ಮಂಡಳಿಗಳನ್ನು ಆಕ್ರಮಿಸಿಕೊಂಡಿದ್ದಾರೆ ಹಾಗೂ ಈ ವಿಧೇಯಕವು ಶ್ರೀಸಾಮಾನ್ಯ ಮುಸ್ಲಿಮರಿಗೆ ನ್ಯಾಯವನ್ನು ತಂದುಕೊಡಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಇನ್ನೆರಡು ಪಕ್ಷಗಳಾದ ಚಿರಾಗ್ ಪಾಸ್ವಾನ್ ಅವರು ಲೋಕಜನಶಕ್ತಿ ಪಕ್ಷ (ರಾಮ್ವಿಲಾಸ್) ಹಾಗೂ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಪಕ್ಷಗಳು ಈಗಾಗಲೇ ವಕ್ಫ್ ವಿಧೇಯಕದ ಕುರಿತು ಪ್ರಶ್ನೆಗಳನ್ನು ಎತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News