ಬಾರ್ಡರ್-ಗವಾಸ್ಕರ್ ಟ್ರೋಫಿ | ಆಸ್ಟ್ರೇಲಿಯ ವಿರುದ್ಧ ಪಂದ್ಯಕ್ಕೆ ಶಮಿ ಲಭ್ಯವಿರುವ ಸಾಧ್ಯತೆ ಇಲ್ಲ: ರೋಹಿತ್ ಶರ್ಮಾ
ಬೆಂಗಳೂರು : ಮುಂಬರುವ ಆಸ್ಟ್ರೇಲಿಯ ಪ್ರವಾಸದಲ್ಲಿ ಮುಹಮ್ಮದ್ ಶಮಿ ಭಾಗವಹಿಸುವ ಸಾಧ್ಯತೆಯನ್ನು ತಳ್ಳಿ ಹಾಕಿರುವ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ವೇಗದ ಬೌಲರ್‌ನ ಮೊಣಕಾಲಿನಲ್ಲಿ ಊತ ಕಾಣಿಸಿಕೊಂಡಿರುವ ಕಾರಣ ಅವರು ಪಾದದ ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ ಎಂದರು.
ಶಮಿ ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಕೊನೆಯ ಬಾರಿ ಪಂದ್ಯ ಆಡಿದ್ದರು. ಆ ನಂತರ ಅವರು ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪ್ರಸಕ್ತ ಸರಣಿ ಇಲ್ಲವೇ ಆಸ್ಟ್ರೇಲಿಯ ಸರಣಿಯಲ್ಲಿ ಅವರು ಫಿಟ್ ಇರಲಿದ್ದಾರೆಂದು ನಿರ್ಧರಿಸಲು ನಮಗೆ ಕಷ್ಟವಾಗುತ್ತಿದೆ. ಇತ್ತೀಚೆಗೆ ಅವರ ಮೊಣಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಅದು ತುಂಬಾ ಅಸಾಮಾನ್ಯವಾಗಿದೆ ಎಂದು ರೋಹಿತ್ ಅವರು ನ್ಯೂಝಿಲ್ಯಾಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮುನ್ನಾದಿನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶಮಿ ಅವರು ಫಿಟ್ ಆಗುವ ಪ್ರಕ್ರಿಯೆಯಲ್ಲಿದ್ದಾರೆ. ಶೇ.100ರಷ್ಟು ಫಿಟ್ ಆಗುವತ್ತ ಸಾಗುತ್ತಿದ್ದಾರೆ. ಅವರ ಮೊಣಕಾಲಿನಲ್ಲಿ ಊತವಿದೆ. ಇದು ಅವರು ಚೇತರಿಸಿಕೊಳ್ಳಲು ಸ್ವಲ್ಪಮಟ್ಟಿಗೆ ಅಡ್ಡಿಯಾಗಿದೆ. ಇದೀಗ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ(ಎನ್‌ಸಿಎ) ಯಲ್ಲಿದ್ದಾರೆ. ಎನ್‌ಸಿಎಯ ಫಿಸಿಯೊ ಹಾಗೂ ವೈದ್ಯರೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ರೋಹಿತ್ ಹೇಳಿದ್ದಾರೆ.