ಮಧ್ಯಪ್ರದೇಶ: ಅತ್ಯಾಚಾರಕ್ಕೆ ಒಳಗಾಗಿದ್ದ ದಲಿತ ಮಹಿಳೆ 'ಆ್ಯಂಬುಲೆನ್ಸ್ ನಿಂದ ಬಿದ್ದು ಸಾವು'
ಭೋಪಾಲ: ಅತ್ಯಾಚಾರಕ್ಕೆ ಒಳಗಾಗಿದ್ದ ದಲಿತ ಮಹಿಳೆಯೊಬ್ಬರು ರವಿವಾರ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ‘‘ಆ್ಯಂಬುಲೆನ್ಸ್ ನಿಂದ ಬಿದ್ದು’’ ಮೃತಪಟ್ಟಿದ್ದಾರೆ. ಆ ಆ್ಯಂಬುಲೆನ್ಸ್ ನಲ್ಲಿ ಅವರ ಚಿಕ್ಕಪ್ಪನ ಮೃತದೇಹವನ್ನು ಸಾಗಿಸಲಾಗುತ್ತಿತ್ತು. ಅವರನ್ನು ದುಷ್ಕರ್ಮಿಗಳು ಹೊಡೆದು ಕೊಂದಿದ್ದರು.
ಕಳೆದ ವರ್ಷದ ಆಗಸ್ಟ್ ನಲ್ಲಿ, ಮಹಿಳೆಯ ಸಹೋದರ ನಿತಿನ್ ಅಹಿರ್ವಾರ್ ರನ್ನು ವಿಕ್ರಮ್ ಸಿಂಗ್ ಠಾಕೂರ್ ಎಂಬಾತನ ನೇತೃತ್ವದ ಗುಂಪೊಂದು ಹೊಡೆದು ಕೊಂದಿತ್ತು. ಈ ಠಾಕೂರ್ ವಿರುದ್ಧ ಮಹಿಳೆಯು 2019ರಲ್ಲಿ ಅತ್ಯಾಚಾರ ಮೊಕದ್ದಮೆ ದಾಖಲಿಸಿದ್ದರು. ತನ್ನ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಹಿಂದಕ್ಕೆ ಪಡೆಯಲು ಮಹಿಳೆಯ ಕುಟುಂಬ ನಿರಾಕರಿಸಿದ ಬಳಿಕ ಠಾಕೂರ್ ನೇತೃತ್ವದಲ್ಲಿ ಕುಟುಂಬದ ಮೇಲೆ ಗುಂಪು ದಾಳಿ ನಡೆದಿತ್ತು.
ಖುರೈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಚಿಕ್ಕಪ್ಪ ರಾಜೇಂದ್ರ ಅಹಿರ್ವಾರ್ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಶನಿವಾರ ಮೃತಪಟ್ಟಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಅವರ ಮೇಲೆ ಯಾಕೆ ದಾಳಿ ನಡೆಸಲಾಗಿತ್ತು ಎನ್ನುವುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಅತ್ಯಾಚಾರ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಆರೋಪಿಯು ರಾಜೇಂದ್ರ ಅಹಿರ್ವಾರ್ ಮೇಲೆ ಒತ್ತಡ ಹೇರುತ್ತಿದ್ದನು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
‘‘ನಮ್ಮ ಮೇಲೆ ನಿರಂತರವಾಗಿ ಒತ್ತಡ ಹೇರಲಾಗುತ್ತಿತ್ತು. ಆದರೆ, ನಾವು ಮೊಕದ್ದಮೆ ಹಿಂದಕ್ಕೆ ಪಡೆದಿರಲಿಲ್ಲ’’ ಎಂದು ಮಹಿಳೆಯ ಇನ್ನೋರ್ವ ಸಹೋದರ ‘ಇಂಡಿಯನ್ ಎಕ್ಸ್ಪ್ರೆಸ್’ಗೆ ಹೇಳಿದ್ದಾರೆ. ‘‘ನಮ್ಮ ಸಹೋದರನನ್ನು ಕೊಲ್ಲಲಾಯಿತು. ಶನಿವಾರ ಅವರು ನಮ್ಮ ಚಿಕ್ಕಪ್ಪನನ್ನು ಕೊಂದಿದ್ದಾರೆ. ನನ್ನ ಸಹೋದರಿ ಮತ್ತು ಚಿಕ್ಕಪ್ಪನ ಹೆತ್ತವರು ಸಾಗರ್ನಿಂದ ಆ್ಯಂಬುಲೆನ್ಸ್ ನಲ್ಲಿ ಮೃತದೇಹವನ್ನು ಹಾಕಿಕೊಂಡು ಹೊರಟಿದ್ದರು. ಆಗ ಸಹೋದರಿ ಆ್ಯಂಬುಲೆನ್ಸ್ನಿಂದ ಬಿದ್ದಿದ್ದಾರೆ’’ ಎಂದು ಅವರು ಹೇಳಿದರು.
ಆ್ಯಂಬುಲೆನ್ಸ್ ಅಪರಿಚಿತ ದಾರಿಯಲ್ಲಿ ಸಾಗುತ್ತಿತ್ತು ಹಾಗೂ ಅತ್ಯಾಚಾರ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಕುಟುಂಬದ ಮೇಲೆ ಒತ್ತಡವಿತ್ತು ಎಂದು ಸಹೋದರ ಆರೋಪಿಸಿದ್ದಾರೆ.
‘‘ಅತ್ಯಾಚಾರ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ನಮ್ಮ ಮೇಲೆ ನಿರಂತರ ಒತ್ತಡವಿತ್ತು. ಇದೇ ಕಾರಣಕ್ಕಾಗಿ ನಮ್ಮ ಚಿಕ್ಕಪ್ಪನನ್ನು ಕೊಲ್ಲಲಾಗಿದೆ’’ ಎಂದರು.
► ನರೇಂದ್ರ ಮೋದಿ ಕಾನೂನಿನ ಆಡಳಿತವನ್ನು ಕೊನೆಗೊಳಿಸಿದ್ದಾರೆ: ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಕಾನೂನಿನ ಆಡಳಿತವನ್ನೇ ಕೊನೆಗೊಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.
ತನ್ನ ಮೇಲೆ ಅತ್ಯಾಚಾರ ನಡೆಸಿದ ಪ್ರಬಲ ಸಮುದಾಯದ ವ್ಯಕ್ತಿಯೊಬ್ಬನ ವಿರುದ್ಧ ದೂರು ನೀಡಿದ್ದ ದಲಿತ ಮಹಿಳೆಯೊಬ್ಬರು ಸಂಶಯಾಸ್ಪದ ರೀತಿಯಲ್ಲಿ ಆ್ಯಂಬುಲೆನ್ಸ್ನಿಂದ ಬಿದ್ದು ಮೃತಪಟ್ಟ ಘಟನೆಗೆ ಪ್ರತಿಕ್ರಿಯಿಸುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ. ‘‘ತನ್ನ ಮೇಲಿನ ದೌರ್ಜನ್ಯದ ವಿರುದ್ಧ ಅತ್ಯಂತ ದುರ್ಬಲ ವ್ಯಕ್ತಿಗೂ ಬಲವಾಗಿ ಧ್ವನಿ ಎತ್ತರಿಸಲು ಸಾಧ್ಯವಾಗುವಂಥ ವ್ಯವಸ್ಥೆಯನ್ನು ನಾವು ಜಾರಿಗೆ ತರುತ್ತೇವೆ. ನ್ಯಾಯವು ಶ್ರೀಮಂತರು ಮತ್ತು ಅಧಿಕಾರವನ್ನು ಅವಲಂಬಿಸಲು ಅವಕಾಶ ನೀಡಲಾಗದು’’ ಎಂದು ಅವರು ಹೇಳಿದ್ದಾರೆ.
‘‘ನರೇಂದ್ರ ಮೋದಿ ಕಾನೂನಿನ ಆಡಳಿತವನ್ನು ಕೊನೆಗೊಳಿಸಿದ್ದಾರೆ. ಮಧ್ಯಪ್ರದೇಶದ ಈ ದಲಿತ ಕುಟುಂಬಕ್ಕೆ ಬಿಜೆಪಿ ನಾಯಕರು ಮಾಡಿರುವ ಅನ್ಯಾಯವನ್ನು ನೆನೆದು ನನ್ನ ಹೃದಯ ರೋಷದಿಂದ ಕುದಿಯುತ್ತಿದೆ’’ ಎಂದು ರಾಹುಲ್ ಗಾಂಧಿ ಎಕ್ಸ್ನಲ್ಲಿ ಬರೆದಿದ್ದಾರೆ.
‘‘ಬಿಜೆಪಿ ಆಡಳಿತದಲ್ಲಿ, ಸರಕಾರವು ಸಂತ್ರಸ್ತ ಮಹಿಳೆಯರ ಪರವಾಗಿ ನಿಲ್ಲುವುದನ್ನು ಬಿಟ್ಟು ಯಾವಾಗಲೂ ಅಪರಾಧಿಗಳ ಪರವಾಗಿಯೇ ನಿಲ್ಲುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ’’ ಎಂದು ಅವರು ಹೇಳಿದ್ದಾರೆ.
ನ್ಯಾಯ ಪಡೆಯಲು ಕಾನೂನಿನ ಮೊರೆ ಹೋಗುವುದನ್ನು ಬಿಟ್ಟು ಬೇರೆ ಆಯ್ಕೆಗಳಿರದ ಪ್ರತಿಯೊಬ್ಬರ ನೈತಿಕ ಸ್ಥೈರ್ಯವನ್ನು ಇಂಥ ಘಟನೆಗಳು ಕುಂದಿಸುತ್ತವೆ ಎಂದು ಕಾಂಗ್ರೆಸ್ ನಾಯಕ ಹೇಳಿದರು.