ಬಜೆಟ್ 2025 | ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇಕೇರ್ ಕ್ಯಾನ್ಸರ್ ಸೆಂಟರ್ ಸ್ಥಾಪನೆ

Update: 2025-02-01 21:15 IST
Nirmala Sitharaman

ನಿರ್ಮಲಾ ಸೀತಾರಾಮನ್ | PTI 

  • whatsapp icon

ಹೊಸದಿಲ್ಲಿ : ಕ್ಯಾನ್ಸರ್ ರೋಗಿಗಳಿಗೆ, ವಿಶೇಷವಾಗಿ ಗ್ರಾಮೀಣ ರೋಗಿಗಳಿಗೆ ನೆಮ್ಮದಿಯನ್ನುಂಟು ಮಾಡುವ ಕ್ರಮದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ರೊಳಗೆ ದೇಶಾದ್ಯಂತ ಜಿಲ್ಲಾ ಆಸ್ಪತ್ರೆಗಳಲ್ಲಿ 200 ಡೇಕೇರ್ ಕ್ಯಾನ್ಸರ್ ಸೆಂಟರ್‌ಗಳ ಸ್ಥಾಪನೆಯನ್ನು ಬಜೆಟ್‌ನಲ್ಲಿ ಪ್ರಸ್ತಾವಿಸಿದ್ದಾರೆ. ಕ್ಯಾನ್ಸರ್ ರೋಗಿಗಳಿಗೆ ಸುಲಭವಾಗಿ ವೈದ್ಯಕೀಯ ಸೇವೆಯನ್ನು ಲಭ್ಯವಾಗಿಸುವುದು ಈ ಉಪಕ್ರಮದ ಉದ್ದೇಶವಾಗಿದೆ.

ಕ್ಯಾನ್ಸರ್,ಅಪರೂಪದ ಕಾಯಿಲೆಗಳು ಮತ್ತು ಇತರ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವುವವರಿಗಾಗಿ ಗಮನಾರ್ಹ ಪರಿಹಾರ ಕ್ರಮಗಳನ್ನು ಘೋಷಿಸಿದ ಸೀತಾರಾಮನ್,36 ಜೀವರಕ್ಷಕ ಔಷಧಿಗಳನ್ನು ಮೂಲ ಕಸ್ಟಮ್ಸ್ ಸುಂಕ(ಬಿಸಿಡಿ)ದಿಂದ ಸಂಪೂರ್ಣ ವಿನಾಯಿತಿಯ ಪಟ್ಟಿಗೆ ಸೇರಿಸಲಾಗುವುದು. ಹೆಚ್ಚುವರಿಯಾಗಿ ಆರು ಜೀವರಕ್ಷಕ ಔಷಧಿಗಳನ್ನು ಶೇ.5ರಷ್ಟು ರಿಯಾಯತಿ ಕಸ್ಟಮ್ಸ್ ಸುಂಕದ ಪಟ್ಟಿಗೆ ಸೇರಿಸಲಾಗುವುದು ಎಂದು ತಿಳಿಸಿದರು.

37 ಔಷಧಿಗಳು ಮತ್ತು ಔಷಧಿ ತಯಾರಿಕೆ ಕಂಪನಿಗಳು ‘ರೋಗಿ ನೆರವು ಕಾರ್ಯಕ್ರಮ’ದಡಿ ಉತ್ಪಾದಿಸುವ ನಿರ್ದಿಷ್ಟ ಔಷಧಿಗಳನ್ನು ಉಚಿತವಾಗಿ ಒದಗಿಸಿದರೆ ಅವುಗಳನ್ನು ಬಿಸಿಡಿಯಿಂದ ಸಂಪೂರ್ಣ ವಿನಾಯಿತಿ ಪಟ್ಟಿಗೆ ಸೇರಿಸಲಾಗುವುದು. 13 ಹೊಸ ರೋಗಿ ನೆರವು ಕಾರ್ಯಕ್ರಮಗಳನ್ನೂ ಈ ಪಟ್ಟಿಗೆ ಸೇರ್ಪಡೆಗೊಳಿಸಲಾಗುವುದು ಎಂದರು.

ಪಿಎಂ ಜನ ಆರೋಗ್ಯ ಯೋಜನೆಯಡಿ ಗಿಗ್ ಕಾರ್ಮಿಕರಿಗೆ ಆರೋಗ್ಯ ರಕ್ಷಣೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದೂ ಅವರು ಪ್ರಕಟಿಸಿದರು.

ಕಳೆದೊಂದು ವರ್ಷದಲ್ಲಿ ಸರಕಾರವು ಸುಮಾರು 1.1 ಲಕ್ಷ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಸೀಟ್‌ಗಳನ್ನು ಸೇರ್ಪಡೆಗೊಳಿಸಿದ್ದು, ಇದು ಶೇ.130ರಷ್ಟು ಏರಿಕೆಯನ್ನು ಸೂಚಿಸಿದೆ. ಮುಂದಿನ ವರ್ಷ ಇನ್ನೂ 10,000 ಸೀಟ್‌ಗಳನ್ನು ಸೇರಿಸಲಾಗುವುದು. ಮುಂದಿನ ಐದು ವರ್ಷಗಳಲ್ಲಿ 75,000 ವೈದ್ಯಕೀಯ ಶಿಕ್ಷಣ ಸೀಟ್‌ಗಳನ್ನು ಹೆಚ್ಚುವರಿಯಾಗಿ ಒದಗಿಸುವ ಗುರಿಯನ್ನು ಸರಕಾರವು ಹೊಂದಿದೆ ಎಂದರು.

ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ‘ಹೀಲ್ ಇನ್ ಇಂಡಿಯಾ’ ಉಪಕ್ರಮಕ್ಕಾಗಿ ಸರಕಾರವು ಖಾಸಗಿ ಕ್ಷೇತ್ರದೊಂದಿಗೆ ಕೈಜೋಡಿಸಲಿದೆ ಮತ್ತು ದೇಶದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಬಯಸುವ ರೋಗಿಗಳಿಗೆ ವೀಸಾ ನಿಯಮಗಳನ್ನು ಸರಳಗೊಳಿಸಲಾಗುವುದು ಎಂದು ಸೀತಾರಾಮನ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News